ಹೆಬ್ಬಾಕ ಕೆರೆಗೆ ಹರಿದ ಹೇಮಾವತಿ ನೀರು

ತುಮಕೂರು, ಸೆ. ೧೪- ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹೆಬ್ಬಾಕ ಕೆರೆಗೆ ಹೇಮಾವತಿ ನೀರು ಹರಿಸುವ ಕಾರ್ಯಕ್ಕೆ ಶಾಸಕ ಡಿ.ಸಿ. ಗೌರಿಶಂಕರ್‌ ಚಾಲನೆ ನೀಡಿದರು.

ನರಸಾಪುರ ಬಳಿ ಇರುವ ಪಂಪ್‍ಹೌಸ್‍ಗೆ ತೆರಳಿ ಬಟನ್‌ ಒತ್ತುವುದರ ಮೂಲಕ ಬುಗಡನಹಳ್ಳಿ ಕೆರೆಯಿಂದ ಹೆಬ್ಬಾಕ ಕೆರೆಗೆ ಹೇಮಾವತಿ ನೀರು ಹರಿಸಲು ಚಾಲನೆ ನೀಡುವ ಮೂಲಕ ಶಾಸಕರು ಗಂಗಾಪೂಜೆ ನೆರವೇರಿಸಿದರು.

ಹೆಬ್ಬಾಕ ಕೆರೆಗೆ ಹೇಮಾವತಿ ನೀರು ಹರಿಸಬೇಕೆಂದು ಹೆಬ್ಬಾಕ ಹಾಗೂ ಅಕ್ಕಪಕ್ಕದ ನೂರಾರು ಗ್ರಾಮಸ್ಥರು ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಸೆಪ್ಟೆಂಬರ್ ತಿಂಗಳೊಳಗೆ ಹೆಬ್ಬಾಕ ಕೆರೆಗೆ ನೀರು ಹರಿಸುವುದಾಗಿ ಶಾಸಕರು ಆಶ್ವಾಸನೆ ನೀಡಿದಂತೆ ಹೆಬ್ಬಾಕ ಕೆರೆಗೆ ನೀರು ಹರಿಸಿ ಈ ಭಾಗದ ಜನರ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದಾರೆ.
ಗಂಗಾಪೂಜೆ ಬಳಿಕ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ಬುಗುಡನಹಳ್ಳಿ, ಹೆಬ್ಬಾಕ, ಮೈದಾಳ, ಕೆರೆಗಳನ್ನು ಮೀಸಲಿಡಲಾಗಿದೆ. ಬುಗುಡನಹಳ್ಳಿ ಕೆರೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಒಳಪಡಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿಯಲ್ಲಿ ಹೆಬ್ಬಾಕ, ಮೈದಾಳ, ಕೆರೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಒಳಪಡಿಸಿ ಪ್ರತಿ ಕೆರೆಯನ್ನು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವಂತೆ ನಗರಾಭಿವೃದ್ಧಿ ಖಾತೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.

ಗ್ರಾಮಾಂತರ ಕ್ಷೇತ್ರದಲ್ಲಿ ಏತ ನೀರಾವರಿ ಯೋಜನಾ ವ್ಯಾಪ್ತಿಗೆ ಒಳಪಡುವ ಕೆರೆಗಳಿಗೆ ಹೇಮಾವತಿ ನೀರು ಹರಿಸಲು 300 ಎಂಸಿಎಫ್‌ಟಿ ನೀರಿನ ಮಿತಿಯನ್ನು ನಿಗದಿಗೊಳಿಸಲಾಗಿದೆ. ಈ ಮಿತಿಯಲ್ಲಿ 3 ರಿಂದ 4 ಕೆರೆಗಳನ್ನು ತುಂಬಿಸಲು ಮಾತ್ರ ಸಾಧ್ಯ. ಹಾಗಾಗಿ ಏತ ನೀರಾವರಿ ಯೋಜನಾ ವ್ಯಾಪ್ತಿಗೆ ಒಳಪಡುವ ಕೆರೆಗಳಿಗೆ ನಿಗದಿಪಡಿಸಿರುವ ಮಿತಿಯನ್ನು 1 ಟಿಎಂಸಿಗೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಹಾಗೂ ಜಲಸಂಪನ್ಮೂಲ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಹೇಮಾವತಿ ನಾಲೆಗಳು ಸಂಪೂರ್ಣ ಅವೈಜ್ಞಾನಿಕವಾಗಿವೆ. ಇದರಿಂದ ಜಿಲ್ಲೆಗೆ ನಿಗದಿಪಡಿಸಿರುವಷ್ಟು ಹೇಮಾವತಿ ನೀರನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿಯವರನ್ನು ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ನಾಲೆಯ ಅಗಲೀಕರಣ ಮತ್ತು ಉನ್ನತೀಕರಣಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವಾಗಿ ಸರ್ವೆ ಕಾರ್ಯ ನಡೆಸಲು ಒಪ್ಪಿರುವುದಾಗಿ ತಿಳಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ 700 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಯವರಿಗೆ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ 85 ಕೋಟಿ ವೆಚ್ಚದಲ್ಲಿ 220 ಕೆ.ವಿ. ವಿದ್ಯುತ್ ಉಪಸ್ಥಾವರ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಲ್ಲಿ ಮುಖ್ಯಮಂತ್ರಿಯವರು ಪ್ರಸ್ತಾವನೆಗೆ ಮಂಜೂರಾತಿ ನೀಡಿದ್ದಾರೆ ಎಂದರು.

ನಿರುದ್ಯೋಗ ಸಮಸ್ಯೆ ನಿವಾರಿಸಬೇಕೆಂಬ ಕುಮಾರಸ್ವಾಮಿಯವರಆಶಯದಂತೆಇದೇ ತಿಂಗಳು ನನ್ನಜನ್ಮದಿನದಂದುಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.ಗ್ರಾಮಾಂತರ ಭಾಗದ ನಿರುದ್ಯೋಗಯುವಕಯುವತಿಯರನ್ನು ಗುರುತಿಸಿ ಉದ್ಯೋಗ ಮೇಳದಲ್ಲಿ ಸುಮಾರು 3000ಕ್ಕೂ ಹೆಚ್ಚು ಉದ್ಯೋಗ ನೀಡಲು ಇಚ್ಚಿಸಿದ್ದು ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆಎಂದು ಮಾಹಿತಿ ನೀಡಿಗ್ರಾಮಾಂತರಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಾಗುವುದುಎಂದರು.

ನರಸಾಪುರ ಹಾಗೂ ಹೆಬ್ಬಾಕ ಗ್ರಾಮಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನರಸಾಪುರಸ ಗ್ರಾಮದ ಮಹಿಳೆಯರು ಶಾಸಕರನ್ನು ಭೇಟಿ ಮಾಡಿ ಎಲ್ಲಿಂದಲೋ ಬಂದವರಿಗೆ ನಿವೇಶನ ನೀಡಲಾಗುತ್ತಿದೆ. ಸ್ಥಳೀಯರನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸ್ಥಳೀಯ ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿದರು.

ಹೆಬ್ಬಾಕ ಗ್ರಾಮದ ಮಹಿಳೆಯರು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಶಾಸಕರ ಮುಂದೆ ಬೇಡಿಕೆ ಇಟ್ಟಾಗ ಇನ್ನೊಂದು ತಿಂಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು
ಹಾಗೆಯೇ ಹೆಬ್ಬಾಕ ಗ್ರಾಮದ ಪ್ರಾಥಮಿಕ ಪಾಠಶಾಲೆಗೆ ಶಾಸಕರು ಭೇಟಿ ನೀಡಿ ಶೀಘ್ರವೆ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಊರುಕೆರೆ ಪಿಡಿಒಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತ್‍ಕುಮಾರ್, ಜೆಡಿಎಸ್ ಯುವಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಮಾಜಿ ಎಪಿಎಂಸಿ ಅಧ್ಯಕ್ಷರಾದ ವಿಜಯ್‍ಕುಮಾರ್,  ಜೆಡಿಎಸ್ ಮುಖಂಡರಾದ ವೈ.ಟಿ. ನಾಗರಾಜು, ಆಜಾಮ್, ಬೆಳಗುಂಬ ಕೆಂಪರಾಜು, ವೆಂಕಟೇಶ್, ಊರುಕೆರೆ ಗ್ರಾ.ಪಂ. ಉಪಾಧ್ಯಕ್ಷ ಊರುಕೆರೆ ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು. .

Leave a Comment