ಹೆದರಿ ಓಡಿ ಹೋಗಲಾರೆ ಡಿಕೆಶಿ ಗುಡುಗು

ಬೆಂಗಳೂರು, ಆ. ೩೦- ಅಕ್ರಮ ಹಣ ಪತ್ತೆಗೆ ಸಂಬಂಧಿಸಿದಂತೆ ಇಡಿ ದಾಖಲಿಸಿರುವ ಪ್ರಕರಣದ ಹಿಂದೆ ಷಡ್ಯಂತ್ರವಿದೆ. ಯಾವುದಕ್ಕೂ ನಾನು ಹೆದರುವುದಿಲ್ಲ. ಎಲ್ಲವನ್ನು ಕಾನೂನಾತ್ಮಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಎದುರಿಸುತ್ತನೆ. ಹೆದರಿ ಓಡಿ ಹೋಗುವವನು ನಾನಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.

ನನ್ನನ್ನು ಬಂಧಿಸಲು ನಾನೇನು ಕೊಲೆ ಮಾಡಿದ್ದೇನಾ ಅಥವಾ ಲಂಚ ಹೊಡೆದಿದ್ದೇನೆಯೇ ಬಂಧನದ ಭೀತಿಯೂ ಇಲ್ಲ, ಅದಕ್ಕೆ ಎದರುವುದೂ ಇಲ್ಲ. ಎಲ್ಲವನ್ನು ಧೈರ್ಯವಾಗಿ ಹೆದರಿಸುತ್ತೇನೆ ಎಂದು ಅವರು ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನು ಯಾವುದೇ ತಪ್ಪು ಮಾಡಿಲ್ಲ. ಪಾರದರ್ಶಕವಾಗಿ ವ್ಯವಹಾರ ಮಾಡಿ ಹಣ ಸಂಪಾದನೆ ಮಾಡಿದ್ದೇನೆ. ಯಾವುದೂ ಅಕ್ರಮ ಹಣ ಅಲ್ಲ. ಆದರೂ ನನ್ನ ವಿರುದ್ಧ ಕೆಲ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಸೇರಿಕೊಂಡು ಷಡ್ಯಂತ್ರ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದರು.
ಕಾನೂನಿಗೆ ಗೌರವ ಕೊಡುವವನು ನಾನು. ನಾವೇ ಮಾಡಿದ ಕಾನೂನಿಗೆ ಗೌರವ ಕೊಡದಿರಲು ಸಾಧ್ಯವೇ. ಕಾನೂನಿನಂತೆ ಎಲ್ಲವನ್ನು ಎದುರಿಸುತ್ತೇನೆ. ಕಾನೂನಿನಂತೆ ನಾನು ರಕ್ಷಣೆ ಮಾಡಿಕೊಳ್ಳುವುದು ನನಗೆ ಗೊತ್ತಿದೆ ಎಂದು ಅವರು ಹೇಳಿದರು.

ನಾನು ತಪ್ಪು ಮಾಡದಿದ್ದರೂ ನನ್ನ ಮೇಲೆ ಇಡಿ ಪ್ರಕರಣ ದಾಖಲಿಸಲಾಗಿದೆ. ಅದೇ ಆಪರೇಷನ್ ಕಮಲದಲ್ಲಿ ನೂರಾರು ಕೋಟಿ ಓಡಾಡಿದ್ದರೂ ಇಡಿಯವರಾಗಲೀ, ಆದಾಯ ತೆರಿಗೆ ಇಲಾಖೆಯವರಾಗಲಿ ಆ ಬಗ್ಗೆ ಗಮನ ಹರಿಸಿಲ್ಲ. ಆಪರೇಷನ್ ಕಮಲ ಬರೀ ಬಾಯಲ್ಲಿ ಖಾಲಿ ನಡೆದಿದೆಯೇ, ಹಣದ ವ್ಯವಹಾರ ನಡೆಸಿಲ್ಲವೆ ಎಂದು ಕಿಡಿಕಾರಿದ ಅವರು, ನನಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ದೆಹಲಿಯಲ್ಲಿ ಇಡಿ ವಿಚಾರಣೆಗೆ ಹಾಜರಾಗಲು ಹೋಗುತ್ತಿದ್ದೇನೆ. ವಿಚಾರಣೆಗೆ ಹಾಜರಾಗಿ ಎಲ್ಲವನ್ನು ಹೇಳುತ್ತೇನೆ. ನನಗೆ ಯಾವುದೂ ಭಯವಿಲ್ಲ. ಪಕ್ಷದ ಕೆಲಸ ಮಾಡಿದ್ದೇನೆ. ನನಗೆ ಯಾವುದರ ಭಯ ಎಂದರು.

ಕೆಲ ಮಾಧ್ಯಮಗಳು ನಾನು ಹೆದರಿ ಓಡಿ ಹೋಗಿದ್ದೇನೆ ಎಂದೆಲ್ಲಾ ಕಪೋಲ ಕಲ್ಪಿತ ವರದಿಗಳನ್ನು ತೋರಿಸುತ್ತಿವೆ. ನಾನು ಹೆದರಿ ಓಡಿ ಹೋಗುವವನಲ್ಲ. ಕೆಂಪೇಗೌಡನ ಮಗ. ಎಲ್ಲವನ್ನು ಹೆದರಿಸುವುದು ನನಗೆ ಗೊತ್ತಿದೆ ಎಂದರು.

ಗುಜರಾತ್ ಶಾಸಕರು, ಮಹಾರಾಷ್ಟ್ರ ಶಾಸಕರು ಹಾಗೂ ರಾಜ್ಯದ ಶಾಸಕರನ್ನು ಕಾಪಾಡಿದ ನಂತರ ನನ್ನ ಮೇಲೆ ಎಲ್ಲವೂ ಶುರುವಾಗಿದೆ. ಪಕ್ಷದ ಕೆಲಸ ಮಾಡಿದ್ದೇನೆ. ಏನೇ ಬರಲಿ ಎದರಿಸುತ್ತೇನೆ. ಐಟಿ ಅಧಿಕಾರಿಗಳು ದೊಡ್ಡ ಪೊಲೀಸ್ ಪಡೆ ತಂದು ತಮ್ಮ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿದರು ತಮ್ಮ ತಾಯಿಯ ಆಸ್ತಿಯನ್ನು ಬೇನಾಮಿ ಆಸ್ತಿ ಎಂದು ತೀರ್ಮಾನಿಸಿ ಅದನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಅದಕ್ಕೆ ನ್ಯಾಯಾಲಯದ ತಡೆ ತಂದು ಕಾನೂನು ಹೋರಾಟ ನಡೆಸಿದ್ದೇನೆ. ನಾನು ಯಾವುದೇ ವಿದೇಶಿ ವ್ಯವಹಾರ ನಡೆಸದಿದ್ದರೂ ವಿದೇಶದಲ್ಲಿ ನನ್ನದು ಯಾವುದೇ ಆಸ್ತಿ ಇರದಿದ್ದರೂ ಇಡಿ ಪ್ರಕರಣ ದಾಖಲಿಸಿದೆ. ನನ್ನ ವ್ಯವಹಾರ, ಆಸ್ತಿ ಇರುವುದೆಲ್ಲ ರಾಜ್ಯದಲ್ಲಿ. ದೆಹಲಿಯಲ್ಲಿ ಎರಡು ಫ್ಲಾಟ್‌ಗಳಿವೆ. ವಿದೇಶದಲ್ಲಿ ನನ್ನದೇನು ವ್ಯವಹಾರ ಇಲ್ಲ ಎಂದರು.

ಇಡಿ ತಮ್ಮ ವಿರುದ್ಧ ಷಡ್ಯಂತ್ರ ಮಾಡಿ ಪ್ರಕರಣ ದಾಖಲಿಸಿದೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಕಾನೂನಿನಲ್ಲಿ ನಂಬಿಕೆ ಇಟ್ಟಿರುವವನು ನಾನು ಎಂದು ಅವರು ಹೇಳಿದರು.
ನ್ಯಾಯಾಲಯದಲ್ಲಿ ನಿನ್ನೆ ಪ್ರಕರಣ ವಜಾ ಆಗುತ್ತಿದ್ದಂತೆಯ ರಾತ್ರಿ ಇಡಿ ಅಧಿಕಾರಿಗಳು ನಮ್ಮ ಮನೆಗೆ ಬಂದು ನಾಳೆ ಒಂದು ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರು.

ನಾನು ಅಧಿಕಾರಿಗಳ ಜತೆ ಗೌರವವಾಗಿ ನಡೆದುಕೊಂಡು ಸಮನ್ಸ್ ಪಡೆದಿದ್ದೇನೆ. ನನ್ನ ಕೌಟುಂಬಿಕ ಹಾಗೂ ರಾಜಕೀಯ ಕಾರಣದಿಂದ ನಾಳೆ ಒಂದು ಗಂಟೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ಗೌರಿ-ಗಣೇಶ ಹಬ್ಬವಿದೆ. ಈ ಹಬ್ಬದಲ್ಲೇ ನಮ್ಮ ಹಿರಿಯರಿಗೆ ಕರ್ಮ ಪೂಜೆಗಳನ್ನು ಮಾಡುವುದು ನಮ್ಮ ಪದ್ಧತಿ. ಏನೇ ಇರಲಿ ಇಂದು ದೆಹಲಿಗೆ ತೆರಳುತ್ತಿದ್ದೇನೆ ಎಂದರು.

Leave a Comment