ಹೆತ್ತವರ ಮೇಲೆ ಹಲ್ಲೆ ನಡೆಸಿ ವ್ಯಕ್ತಿ ಆತ್ಮಹತ್ಯೆ

ಕುಂದಾಪುರ, ಆ.೧೩- ವ್ಯಕ್ತಿಯೊಬ್ಬ ತನ್ನ ತಂದೆ-ತಾಯಿ ಮೇಲೆ ಹಲ್ಲೆ ನಡೆಸಿ, ಬಳಿಕ ಅವರ ಮೃತಪಟ್ಟರೆಂಬ ಭಯದಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ಬಿಜೂರು ಎಂಬಲ್ಲಿನ ದೀಟಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಿನ್ನೆ ಬೆಳಗ್ಗೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನ್ನು ರಾಘವ ಪೂಜಾರಿ (೩೨) ಎಂದು ಗುರುತಿಸಲಾಗಿದೆ. ಈತನಿಂದ ಹಲ್ಲೆಗೊಳಗಾಗಿದ್ದ ಮಂಜು ಪೂಜಾರಿ ಹಾಗೂ ಹೆರಿಯಕ್ಕ ಅವರು ಗಂಭೀರ ಗಾಯಗೊಂಡಿದ್ದು, ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಟೇಲ್ ಉದ್ಯಮಿಯಾಗಿದ್ದ ರಾಘವ ಪೂಜಾರಿ ಮೂರು ವರ್ಷಗಳಿಂದ ಊರಿನಲ್ಲಿಯೇ ನೆಲೆಸಿದ್ದನು. ಎರಡು ದಿನಗಳ ಹಿಂದೆ ಧರ್ಮಸ್ಥಳಕ್ಕೆ ಹೋಗಿದ್ದು, ವಾಪಸ್ ನಿನ್ನೆ ಬೆಳಗ್ಗೆ ಮನೆಗೆ ಬಂದು ಬಾಗಿಲು ತೆಗೆಯಲು ಮನೆ ಬಾಗಿಲು ಬಡಿದಿದ್ದು, ಆದರೆ ಬಾಗಿಲು ತೆರೆಯುವುದು ತಡವಾದ ಹಿನ್ನೆಲೆಯಲ್ಲಿ ಸಿಟ್ಟಿನಿಂದ ತಂದೆಯ ಮೆಲೆ ಮರದ ದೊಣ್ಣೆಯಿಂದ ಹೊಡೆದಿದ್ದಾನೆ ಎನ್ನಲಾಗಿದೆ. ಈ ವೇಳೆ ತಡೆಯಲು ಬಂದ ತಾಯಿ ತಲೆ ಮೇಲೆ ಕೂಡ ಹೊಡೆದಿದ್ದಾನೆ ಎನ್ನಲಾಗಿದೆ. ಬಲವಾದ ಏಟಿನ ಪರಿಣಾಮ ಇಬ್ಬರೂ ಕುಸಿದು ಬಿದ್ದಿದ್ದಾರೆ. ಇದರಿಂದ ಹೆತ್ತವರು ಮೃತಪಟ್ಟರು ಎಂಬ ಭಯದಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ್, ಡಿವೈಎಸ್‌ಪಿ ಪ್ರವೀಣ್ ನಾಯಕ್, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ರಾಘವ ಪಡೀಲ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment