ಹೆಣ್ಣುಮಕ್ಕಳಿಗೆ ಪಾಲಿಲ್ಲವೆಂಬ ಮಾತು ನಂಬಬೇಡಿ: ಭಾಗೀರಥಿ ಜಿ.ಹೆಚ್.

ಹರಿಹರ.ಆ.12; ಹೆಣ್ಣುಮಕ್ಕಳ ಆಸ್ತಿ ಹಕ್ಕಿಗೆ ಸಂಬಂಧಿಸಿಂತೆ ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದ ನಂತರ ಕೆಲವರು ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲವೆಂದು ಹೇಳುತ್ತಿದ್ದು, ಇಂತಹ ಸುಳ್ಳು ಮಾತುಗಳನ್ನು ನಂಬಬೇಕಿಲ್ಲ ಎಂದು ವಕೀಲರಾದ ಜಿ.ಹೆಚ್.ಭಾಗೀರಥಿ ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನಾ ಇಲಾಖೆ, ಬ್ಲಾಕ್ ಸೊಸೈಟಿ ಆಶ್ರಯದಲ್ಲಿ ನಗರದ ತಾಪಂ ಆವರಣದ ಸ್ತ್ರೀಶಕ್ತಿ ಭವನದಲ್ಲಿ ಆಯೋಜಿಸಿದ್ದ ಸ್ತ್ರೀಶಕ್ತಿ ಗುಂಪುಗಳ ಬಲವರ್ಧನೆ ಕಾರ್ಯಾಗಾರದಲ್ಲಿ ಮಹಿಳಾ ಪರ ಕಾನೂನುಗಳ ಕುರಿತು ಅವರು ಉಪನ್ಯಾಸ ನೀಡಿದರು.
2005ರ ಹಿಂದೂ ವಾರಸಾ ತಿದ್ದುಪಡಿ ಅಧಿನಿಯಮ ಜಾರಿಯಾದ ಸೆ.9, 2005ಕಿಂತ ಮುಂಚೆ ತಂದೆ ಮೃತನಾಗಿದ್ದರೆ ಅಥವಾ ಈ ಕಾಯ್ದೆಯ ಬಿಲ್ ಮಂಡನೆಯಾದ ಡಿ.20,2004 ಕ್ಕಿಂತ ಮುಂಚೆ ಪಿತ್ರಾರ್ಜಿತ ಆಸ್ತಿಯ ಪಾಲು ವಿಭಾಗವಾಗಿದ್ದರೆ ಅಂತಹ ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಹಣ್ಣುಮಕ್ಕಳಿಗೆ ಗಂಡು ಮಕ್ಕಳಂತೆ ಸಮಾನ ಪಾಲಿಲ್ಲ. ಆದರೆ ಈ ಪಿತ್ರಾರ್ಜಿತ ಆಸ್ತಿಯಲ್ಲಿ ತಂದೆಗೆ ಬರುವ ಅಂಶಿಕ ಪಾಲಿನಲ್ಲಿ ಮತ್ತು ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಂತೆ ಹೆಣ್ಣುಮಕ್ಕಳಿಗೂ ಸಮಾನವಾದ ಹಕ್ಕಿದೆ. ಸುಪ್ರಿಂ ತೀರ್ಪಿನ ಷರತ್ತುಗಳು ಆಯಾ ಪ್ರಕರಣಕ್ಕೆ ವಿಭಿನ್ನವಾಗಿ ಅನ್ವಯಿಸುವುದರಿಂದ ಹೆಣ್ಣುಮಕ್ಕಳು ಉಚಿತ ಸೇವೆ ಸಲ್ಲಿಸುವ ಕಾನೂನು ಸೇವಾ ಸಮಿತಿಗಳಲ್ಲಿ ಸೂಕ್ತ ಮಾಹಿತಿ ಪಡೆದುಕೊಳ್ಳಬಹುದು ಎಂದರು. ಮಹಿಳೆಯರ ಮೇಲಾಗುವ ದೈಹಿಕ, ಮಾನಸಿಕ, ಭಾವನಾತ್ಮಕ ದೌರ್ಜನ್ಯ, ಶೋಷಣೆ ತಡೆಯಲು ಹಲವಾರು ಕಾನೂನುಗಳಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆ ತನ್ನ ಮೇಲಾದ ಅನ್ಯಾಯದ ವಿರುದ್ದ ದೂರು ನೀಡಲು ಖುದ್ದಾಗಿ ಠಾಣೆಗೆ ಹೋಗಬೇಕಾಗಿಲ್ಲ. ಈಮೇಲ್, ಅಂಚೆ ಮೂಲಕ ದೂರು ರವಾನಿಸಿದರೂ ಇದ್ದಲ್ಲಿಗೆ ಬಂದು ಪೊಲೀಸರು ಹೇಳಿಕೆ ಪಡೆದುಕೊಳ್ಳುತ್ತಾರೆ ಎಂದರು.ಅತ್ಯಾಚಾರ ಸಂತ್ರಸ್ಥೆ ಯಾವುದೇ ಠಾಣೆಗೆ ದೂರು ಸಲ್ಲಿಸಿದರೂ ನ್ಯಾಯಾಧಿಕರಣದ ನೆಪದಲ್ಲಿ ನಿರಾಕರಿಸುವಂತಿಲ್ಲ. ಠಾಣಾಧಿಕಾರಿ ಕಾನೂನು ಸೇವಾ ಪ್ರಾಧಿಕಾರ ಸಂಪರ್ಕಿಸಿ, ಆಕೆಗೆ ಉಚಿತ ಕಾನೂನು ನೆರವು ಒದಗಿಸಿಕೊಡಬೇಕು, ತನಿಖೆ ನೆಪದಲ್ಲಿ ಹೆಣ್ಣುಮಕ್ಕಳ ಖಾಸಗೀತನ, ಘನತೆ, ಸಭ್ಯತೆಗೆ ದಕ್ಕೆಯಾಗಬಾರದೆಂದು ಸುಪ್ರಿಂ ಆದೇಶಿಸಿದೆ ಎಂದರು.ಉದ್ಘಾಟಿಸಿ ಮಾತನಾಡಿದ ಸಿಡಿಪಿಒ ರಾಮಲಿಂಗಪ್ಪ ತಾಲ್ಲೂಕಿನ ಸ್ತ್ರೀಶಕ್ತಿ ಗುಂಪುಗಳಿಂದ ವಾರ್ಷಿಕ 1.5 ಕೋ.ರೂ. ಉಳಿತಾಯವಾಗುತ್ತಿದೆ. ಆರ್ಥಿಕ ಉಳಿತಾಯದಿಂದ ಮಹಿಳೆಯರ ಮಾನಸಿಕ ಸದೃಡತೆ ಬಲಿಷ್ಟವಾಗುತ್ತಿದೆ. ಇಲಾಖೆಯಿಂದ ನೀಡುವ ಕೌಶಲ್ಯವೃದ್ದಿ ತರಬೇತಿ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಪ್ರಬಂಧಕ ಎನ್.ಟಿ.ಯರ್ರಿಸ್ವಾಮಿ ಬ್ಯಾಂಕ್ ಸಾಲ ಸೌಲಭ್ಯ, ವ್ಯವಹಾರಗಳ ಬಗ್ಗೆ, ಎನ್‍ಎಲ್‍ಎಂಆರ್ ಸಂಯೋಜಕಿ ಸಾವಿತ್ರಿ ತಾಪಂ ಮತ್ತು ಗ್ರಾಪಂಗಳಿಂದ ಸ್ತ್ರೀಶಕ್ತಿ ಗುಂಪುಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ, ನಬಾರ್ಡ್ ಅಧಿಕಾರಿ ರವೀಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಚಟುವಟಿಕೆಗಳಿಗೆ ನೀಡುವ ನೆರವಿನ ಕುರಿತು ಹಾಗೂ ಕೆನರಾ ಬ್ಯಾಂಕ್ ಸಂಸ್ಥೆಯ ಕವಿತಾ ಸ್ವ-ಉದ್ಯೋಗ ತರಬೇತಿ ಬಗ್ಗೆ ಉಪನ್ಯಾಸ ನೀಡಿದರು.ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಎ.ಎಸ್.ಇಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಸಾವಯವ ಕೃಷಿ ಮತ್ತು ಸ್ವಉದ್ಯೋಗ ಕೇಂದ್ರದ ಸರೋಜಮ್ಮ, ಎಸಿಡಿಪಿಒ ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು. ತಾಲ್ಲೂಕಿನ ಸ್ತ್ರೀಶಕ್ತಿ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Comment