ಹೆಚ್‌ಡಿಕೆ ನಂಬಿ ಗರ್ಭಿಣಿಯಾದರೆ ಬೀದಿಗೆ ಬರುತ್ತಿದ್ದರು -ಆಯನೂರು

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಜು. ೧೨- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮಾತು ಕೇಳಿ ಮಹಿಳೆಯರು ಗರ್ಭಿಣಿಯಾಗಿದ್ದರೆ ಬೀದಿಗೆ ಬರುತ್ತಿದ್ದರು ಎನ್ನುವ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಹೇಳಿಕೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಿಧಾನ ಪರಿಷತ್‌ನಲ್ಲಿ ಮಾತಿನ ಚಕಮಕಿಗೆ ಕಾರಣವಾಯಿತು.

ಮುಂಗಡ ಪತ್ರದ ಮೇಲೆ ಚರ್ಚೆ ನಡೆಸುತ್ತಿದ್ದ ವೇಳೆ ಆಯನೂರು ಮಂಜುನಾಥ್ ಬಳಸುತ್ತಿದ್ದ ಪದ ವಾಗ್ವಾದಕ್ಕೂ ಕಾರಣವಾಯಿತು.

ಗರ್ಭಿಣಿ ಮಹಿಳೆಯರಿಗೆ ಪ್ರತಿ ತಿಂಗಳು 6 ಸಾವಿರ ರೂ. ಕೊಡುತ್ತೇನೆಂದು ಭರವಸೆ ನೀಡಿದ್ದ ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ಅವರ ಮಾತನ್ನು ಮಹಿಳೆಯರು ಕೇಳಿ, ಗರ್ಭಿಣಿಯಾಗಿದ್ದರೆ ಅವರ ಸ್ಥಿತಿ ಹರೋಹರ ಎಂದರು.

ಮಂಜುನಾಥ್ ಅವರ ಹೇಳಿಕೆಗೆ ಸಭಾನಾಯಕಿ ಡಾ. ಜಯಮಾಲಾ, ಆಡಳಿತ ಪಕ್ಷದ ಸದಸ್ಯರಾದ ವಿ.ಎಸ್. ಉಗ್ರಪ್ಪ, ಜಯಮ್ಮಬಾಲರಾಜು, ವೀಣಾ ಅಚ್ಚಯ್ಯ ಆಕ್ಷೇಪಿಸಿ, ಯಾರು ಯಾರನ್ನು ಕೇಳಿ ಗರ್ಭಿಣಿಯಾಗುವುದಿಲ್ಲ. ನಿಮ್ಮನ್ನು ಹೆರುವಾಗ ನಿಮ್ಮ ತಾಯಿ ಯಾರನ್ನಾದರೂ ಕೇಳಿ ಗರ್ಭಿಣಿಯಾಗಿದ್ದರೆ ಎನ್ನುವ ಮತ್ತೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.

ಈ ಹಂತದಲ್ಲಿ ಮಾತನಾಡಿದ ವಿ.ಎಸ್. ಉಗ್ರಪ್ಪ, ಮಂಜುನಾಥ್ ಅವರನ್ನು ನಂಬಿಕೊಂಡು ಮಹಿಳೆಯರು ಗರ್ಭಿಣಿಯಾಗಲಿದ್ದಾರೆಯೇ ಎಂದು ದೂಷಿಸಿದರು. ಅದಕ್ಕೆ ಮಂಜುನಾಥ್ ಎಲ್ಲ ಮುಖ್ಯಮಂತ್ರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಉಗ್ರಪ್ಪ ಅವರನ್ನು ಕೇಳಿ, ಮಹಿಳೆಯರು ಗರ್ಭಿಣಿಯಾಗಬಹುದು ಎಂದರು.

ಮತ್ತೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಚರ್ಚೆ ನಡೆಯಿತು.

ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ವಿ.ಎಸ್. ಉಗ್ರಪ್ಪ, ಹೆಣ್ಣು ಮಕ್ಕಳ ಬಗ್ಗೆ ಅಗೌರವದಿಂದ ನಡೆದುಕೊಳ್ಳುವ ಸಂಸ್ಕೃತಿ ಸರಿಯಲ್ಲ. ಇದು ಮನು ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ತಿರುಗೇಟು ನೀಡಿದರು.

ಮಧ್ಯೆ ಪ್ರವೇಶಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್, ಆಯನೂರು ಮಂಜುನಾಥ್ ಹೇಳಿರುವುದನ್ನು ಆಡಳಿತ ಪಕ್ಷದ ಸದಸ್ಯರು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ.  ಅವರು ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

ಈ ಹಂತದಲ್ಲಿ ಮಾತು ಮಾತಿಗೆ ಬೆಳೆದು ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಸಭಾಪತಿ ಪೀಠದಲ್ಲಿದ್ದ ಬಿಜೆಪಿಯ ಹಿರಿಯ ಸದಸ್ಯ ಕೆ.ಬಿ. ಶಾಣಪ್ಪ ಆಯನೂರು ಮಂಜುನಾಥ್ ಅವರಿಗೆ ತಮ್ಮ ಚರ್ಚೆಯನ್ನು ಪೂರ್ಣಗೊಳಿಸುವಂತೆ ಪದೇ ಪದೇ ಸೂಚನೆ ನೀಡಿದರೂ ಕೇಳುವ ಗೋಜಿಗೆ ಹೋಗದೆ ಮಾತು ಮುಂದುವರೆಸಿದರು.

ಆಗ ಕೆ.ಬಿ. ಶಾಣಪ್ಪ, ಆಯನೂರು ಮಂಜುನಾಥ್ ಅವರಿಗೆ ನೀಡಿದ ಅವಧಿ ಮುಗಿದಿದೆ ಎಂದು ಹೇಳಿ, ಬಿಜೆಪಿಯ ತೇಜಸ್ವಿನಿ ರಮೇಶ್ ಅವರನ್ನು ಚರ್ಚೆಗೆ ಆಹ್ವಾನಿಸಿದರು.  ಆಗ ಎದ್ದು ನಿಂತ ಆಯನೂರು ಮಂಜುನಾಥ್ ತಮ್ಮ ಸ್ಥಾನದಲ್ಲಿ ಕುಳಿತಿದ್ದಾಗ ತಮ್ಮತ್ತ ಎದ್ದು ಎದ್ದು ಕುಣಿದಾಡುತ್ತೀರಿ, ಸಭಾಪತಿ ಪೀಠದಲ್ಲಿ ಅಲಂಕರಿಸಿದರೆ ಲಂಗು ಲಗಾಮು ಇಲ್ಲದಂತೆ ವರ್ತಿಸುತ್ತೀರಿ ಎನ್ನುವ ಹೇಳಿಕೆ ಮತ್ತೆ ಆಡಳಿತ – ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಆಗ ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ಸದಸ್ಯರು ಲಂಗು-ಲಗಾಮು ಪದವನ್ನು ಕಡತದಿಂದ ತೆಗೆದು ಹಾಕಬೇಕು ಎಂದು ಸಭಾಪತಿಗಳನ್ನು ಆಗ್ರಹಿಸಿದರು. ಆಗ ಕೆ.ಬಿ. ಶಾಣಪ್ಪ ಕಡತ ತರಿಸಿಕೊಂಡು ನೋಡಿ, ಆನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು.

ಅದಕ್ಕೆ ಆಕ್ಷೇಪಿಸಿದ ಆಯನೂರು ಮಂಜುನಾಥ್, ನನ್ನ ಅನುಮತಿ ಇಲ್ಲದೆ ಕಡತದಿಂದ ಯಾವುದೇ ಪದಗಳನ್ನು ತೆಗೆಸುವಂತಿಲ್ಲ ಎಂದು ಹೇಳಿದ ಮಾತು ಆಡಳಿತ ಪಕ್ಷದ ಸದಸ್ಯರಾದ ಉಗ್ರಪ್ಪ, ಹೆಚ್.ಎಂ. ರೇವಣ್ಣ, ನಾರಾಯಣಸ್ವಾಮಿ ಸೇರಿದಂತೆ ಹಲವು ಸದಸ್ಯರನ್ನು ಕೆರಳಿಸಿತು.

ಯಾವ ಪದ ಕಡತದಲ್ಲಿ ಇರಬೇಕು, ಇರಬಾರದು ಎನ್ನುವುದನ್ನು ನಿರ್ಧರಿಸುವುದು ಸಭಾಪತಿಯ ಅಧಿಕಾರ. ಅದನ್ನು ನೀವು ಪ್ರಶ್ನಿಸಕೂಡದು ಎಂದು ಹೇಳಿದಾಗ, ಮತ್ತೆ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಈ ವಿಷಯವನ್ನು ಇಲ್ಲಿಗೆ ಮುಗಿಸಿಬಿಡಿ ಎಂದು ಸಭಾಪತಿ ಸ್ಥಾನದಲ್ಲಿದ್ದ ಕೆ.ಬಿ. ಶಾಣಪ್ಪ ಅವರಿಗೆ ಮನವಿ ಮಾಡಿದರು.

Leave a Comment