ಹೆಚ್‌ಡಿಕೆಗೆ ಬೊಮ್ಮಾಯಿ ತಿರುಗೇಟು

ಬೆಂಗಳೂರು, ಜ.೨೨- ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಲಘುವಾಗಿ ಮಾತನಾಡಿರುವುದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿ, ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಮಾಡಿ ಮತ್ತು ಅದನ್ನು ಸ್ಫೋಟಿಸಿ ನಿಷ್ಕ್ರಿಯಗೊಳಿಸಿದ ಪೊಲೀಸರ ಕ್ರಮವನ್ನು ಅಣಕು ಪ್ರದರ್ಶನ ಎಂದು ಟೀಕಿಸಿದ್ದಾರೆ.

ಕುಮಾರಸ್ವಾಮಿಯವರು 2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಅವರು ವಾಗ್ದಾಳಿ ನಡೆಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಯಾರು ಯಾವುದೇ ಸಂಘಟನೆಯ ಮೇಲಾಗಲಿ, ವ್ಯಕ್ತಿಯ ಮೇಲಾಗಲಿ ಆರೋಪ ಹೊರಿಸಿರಲಿಲ್ಲ. ಆರೋಪಿಯನ್ನು ಹಿಡಿಯುತ್ತೇವೆ ಎಂದಿದ್ದೆವು, ಹಿಡಿದಿದ್ದೇವೆ, ಯಾರು ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದರು.

ಅಧಿಕಾರ ಕಳೆದುಕೊಂಡ ಹತಾಶೆಯಿಂದ ಕುಮಾರಸ್ವಾಮಿಯವರು ಗೊಂದಲ ಸೃಷ್ಟಿಸುವ ಕೆಲಸ ಮಾಡುವುದು ಸರಿಯಲ್ಲ. ಬಾಂಬ್ ಪತ್ತೆ ಬಗ್ಗೆ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಇಂತಹ ಹೇಳಿಕೆಗಳು ಗೊಂದಲಕ್ಕೆ ಕಾರಣವಾಗುತ್ತವೆ. ಸತ್ಯಾ ಸತ್ಯತೆಯನ್ನು ತಿಳಿದು ಮಾತನಾಡುವುದು ಒಳ್ಳೆಯದು ಎಂದರು.

ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ರಾಜಕಾರಣ ಮಾಡುವುದನ್ನು ಬಿಟ್ಟು ಸರ್ಕಾರದ ಜತೆ ಸಹಕರಿಸಲಿ ಎಂದರು.
ಆರೋಪಿ ಬಂಧನ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್ ಇಂದು ಬೆಳಿಗ್ಗೆ ಬೆಂಗಳೂರಿನ ಪೊಲೀಸ್ ಮಹಾ ನಿರ್ದೇಶಕರಿಗೆ ಶರಣಾಗಿದ್ದಾನೆ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಬಂಧಿತ ಆರೋಪಿ ಆದಿತ್ಯರಾವ್‌ನ ವಿಚಾರಣೆ ನಂತರ ಬಾಂಬ್ ಪತ್ತೆ ಪ್ರಕರಣದ ಸಂಪೂರ್ಣ ವಿವರಗಳು ಸಿಗಲಿವೆ ಎಂದು ಅವರು ಹೇಳಿದರು. ಈ ಬಾಂಬ್ ಪತ್ತೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

Leave a Comment