ಹೆಚ್ಚಿದ ಮೆಣಸಿನಕಾಯಿ ಆವಕ

ಬ್ಯಾಡಗಿ, ಫೆ 12- ಪಟ್ಟಣದ ಅಂತರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಫೆ.11 ಸೋಮವಾರ ಒಟ್ಟು ಎರಡೂವರೆ ಲಕ್ಷ ಚೀಲಗಳಷ್ಟು ಆವಕವಾಗುವ ಮೂಲಕ ಸ್ವಲ್ಪದರಲ್ಲೇ ಮತ್ತೊಂದು ದಾಖಲೆಯನ್ನು ನಿರ್ಮಿಸುವುದರಿಂದ ವಂಚಿತವಾಯಿತು.
ಒಂದೇ ದಿವಸ 2.64 ಲಕ್ಷ ಚೀಲಗಳಷ್ಟು ಆವಕವಾಗುವ ಮೂಲಕ ಇಲ್ಲಿಯವರೆಗಿನ ದಾಖಲೆಯಾಗಿತ್ತು, ಆದರೆ ಸೋಮವಾರ 2.55 ಲಕ್ಷ ಚೀಲಗಳಷ್ಟು ಆವಕವಾಗುವ ಮೂಲಕ ಸ್ವಲ್ಪದರಲ್ಲೇ ತನ್ನದೇ ದಾಖಲೆಯನ್ನು ಮುರಿಯುವುದರಿಂದ ವಂಚಿತವಾಯಿತು. ಭಾನುವಾರ ಬೆಳಿಗ್ಗೆಯಿಂದಲೇ ಒಂದೇ ಸಮನೆ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಬರಲು ಪ್ರಾರಂಭಿಸಿದವು, ಸಂಜೆ ವೇಳೆಗಾಗಲೇ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳನ್ನು ಇಡಲಿಕ್ಕೆ ಸ್ಥಳಾವಕಾಶದ ಕೊರತೆಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿದ್ದವು, ಹೀಗಾಗಿ ಕಳೆದ ರಾತ್ರಿಯೇ ಮಾರುಕಟ್ಟೆ ಆವರಣ ಭರ್ತಿಯಾಗಿತ್ತಲ್ಲದೇ ವಾಹನ ಸೇರಿದಂತೆ ಚೀಲಗಳನ್ನು ಮಾರಾಟಕ್ಕೆ ಹಚ್ಚಲು ಸ್ಥಳವಾಕಾಶದ ಕೊರತೆಯಾಗಿದ್ದು ಕಂಡು ಬಂದಿತು. ರಾಜ್ಯದ ಬಳ್ಳಾರಿ, ಕಲಬುರ್ಗಿ, ರಾಯಚೂರು ಸೇರಿದಂತೆ ನೆರೆಯ ಆಂಧ್ರಪ್ರದೇಶದ ಆದೋನಿ, ಕರ್ನೂಲ, ಪ್ರಕಾಶಂ, ಶ್ರೀಶೈಲಂ, ಗುಂತಕಲ್ಲ ಹಾಗೂ ಗುಂಟೂರು ಜಿಲ್ಲೆಗಳ ರೈತರು ಮಾರಾಟಕ್ಕೆಂದು ಬ್ಯಾಡಗಿ ಎಪಿಎಂಸಿಗೆ ಲಾರಿಗಳ ಮೂಲಕ ತರಲಾರಂಭಿಸಿದರು.
ಎಲ್ಲಿ ನೋಡಿದರಲ್ಲಿ ಚೀಲಗಳೇ: ಇಲ್ಲಿಯವರೆಗೂ 1 ರಿಂದ 1.5 ಲಕ್ಷ ಚೀಲಗಳಷ್ಟು ಆಸುಪಾಸಿನಲ್ಲಿದ್ದ ಆವಕ, ಪ್ರಸಕ್ತ ವರ್ಷ ಅತೀ ಹೆಚ್ಚು ಆವಕ ಇದಾಗಿದ್ದರಿಂದ ಮಾರುಕಟ್ಟೆಯಲ್ಲೆಡೆ ಕೆಂಪು ಮೆಣಸಿನಕಾಯಿ ಚೀಲಗಳೇ ಕಾಣುತ್ತಿದ್ದವು, ಕೆಲ ವಾಹನಗಳಂತೂ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿದ್ದರಿಂದ ನಿಂತಲ್ಲೇ ನಿಂತು ಮೆಣಸಿನಕಾಯಿ ಚೀಲಗಳನ್ನು ಸಹ ಇಳಿಸಿಕೊಳ್ಳಲು ಸಾದ್ಯವಾಗಲಿಲ್ಲ ಸ್ಥಳಾವಕಾಶದ ಕೊರತೆಯಿಂದ ಜಾಗವಿಲ್ಲದೇ, ಮಾರಾಟಕ್ಕೆ ಬಂದಿದ್ದು ಶೇ.20 ರಷ್ಟು ಮೆಣಸಿನಕಾಯಿ ಚೀಲಗಳು ಲಾರಿಗಳಲ್ಲೇ ಉಳಿದುಕೊಂಡವು.
ವಾಹನ ಹೊರಹಾಕಿದ ಪೊಲೀಸ್ ಹಾಗೂ ಎಪಿಎಂಸಿ ಸಿಬ್ಬಂದಿ: ಸಂಜೆಯಿಂದಲೇ ಮಾರುಕಟ್ಟೆ ಪ್ರಾಂಗಣ ತುಂಬಿದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯು ಅಸ್ತವ್ಯಸ್ತ ವಾಗಿತ್ತು, ಹಲವೆಡೆ ರೈತರು ಹಾಗೂ ಪೊಲೀಸರೊಂದಿಗೆ ಸಂಚಾರ ಮಾರ್ಗ ಸರಳ ಮಾಡುವ ಕುರಿತು ಮಾತಿನ ಚಕಮಕಿ ಸಹ ನಡೆದವು, ಅದಾಗ್ಯೂ ಪೊಲೀಸ್ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆಯಿಂದ ವಾಹನಗಳನ್ನು ಹೊರ ಹಾಕುವ ಕಾರ್ಯಸುಗಮವಾಗಿ ಸಾಗಿತು.
ಮುಖ್ಯದ್ವಾರ ಬಂದ್:ಇತ್ತ ಮಾರುಕಟ್ಟೆ ಪ್ರಾಂಗಣ ಭರ್ತಿಯಾಗುತ್ತಿದ್ದಂತೆ ಪೊಲೀಸ್ ಮತ್ತು ಎಪಿಎಂಸಿ ಸಿಬ್ಬಂದಿ ಮಾರುಕಟ್ಟೆ ಮುಖ್ಯದ್ವಾರವನ್ನು ಸ್ಥಗಿತಗೊಳಿಸಿದ ರಲ್ಲದೇ ಮೆಣಸಿನಕಾಯಿ ಹೊತ್ತು ತಂದಿದ್ದ ನೂರಾರು ಲಾರಿಗಳನ್ನು ಚೀಲಗಳ ಸಮೇತ ಪಟ್ಟಣದ ಬನ್ನಿಹಟ್ಟಿ ರಸ್ತೆಗೆ ಸ್ಥಳಾಂತರಿಸಲಾಯಿತು, ಈ ಸಂದರ್ಭದಲ್ಲಿ ಕೆಲ ರೈತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆಗಳು ಜರುಗಿದವು ಈ ಸಂದರ್ಭದಲ್ಲಿ ಮದ್ಯಪ್ರವೇಶಿಸಿದ ಸಿಪಿಐ ಭಾಗ್ಯವತಿ, ಪಿಎಸ್‍ಐ ಮಹಾಂತೇಶ ಹಾಗೂ ಎಪಿಎಂಸಿ ಅಧ್ಯಕ್ಷ ಕರಬಸಪ್ಪ ನಾಯ್ಕರ, ಕಾರ್ಯದರ್ಶಿ ನ್ಯಾಮಗೌಡ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಆಕ್ರೋಶಗೊಂಡಿದ್ದ ರೈತರನ್ನು ಸಮಾಧಾನಪಡಿಸಿದರು.
ಸ್ಥಳಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ:ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಡಿವೈಎಸ್‍ಪಿ ಕುಮಾರಪ್ಪ ರೈತರೊಂದಿಗೆ ಸಹಕರಿಸುವ ಮೂಲಕ ಮೆಣಸಿನಕಾಯಿ ಇಳಿಸಿದ ಎಲ್ಲ ವಾಹನಗಳನ್ನು ಮಾರುಕಟ್ಟೆಯಿಂದ ಹೊರಗೆ ಕಳಿಸಲು ಸೂಚಿಸಿದರು. ಮಾರುಕಟ್ಟೆ ಪ್ರದೇಶವು ಬಹಳ ಚಿಕ್ಕದಾಗಿದ್ದು ವ್ಯಾಪಾರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ, ಇದರಿಂದ ಸಂಚಾರ ಹಾಗೂ ಸ್ಥಳದ ಕೊರತೆಯಾಗುತ್ತಿದೆ. ತರೇದಹಳ್ಳಿ ರಸ್ತೆಗೆ ಹೊಂದಿರುವ ನೂರು ಎಕರೆ ಯಷ್ಟು ಜಮೀನು ಖರೀದಿಸಿ ಮಾರುಕಟ್ಟೆ ಪ್ರದೇಶದ ವಿಸ್ತರಣೆ ಮಾಡುವ ಇಂಗಿತವನ್ನು ಸುದ್ದಿಗಾರರೆದುರು ವ್ಯಕ್ತಪಡಿಸಿದರು. ಪಟ್ಟಣದ ಮುಖ್ಯರಸ್ತೆಗೆ ಸರ್ಕಾರದಿಂದ ಹಣಕಾಸಿನ ನೆರವು ಬಂದಿದ್ದು ಇನ್ನೆರಡು ತಿಂಗಳಲ್ಲಿ ಸುಸಜ್ಜಿತ ವಾದ ದ್ವಿಪಥದ ರಸ್ತೆ ನಿರ್ಮಿಸಿ ಮುಖ್ಯರಸ್ತೆಯ ಸಂಚಾರ ಸಮಸ್ಯೆ ಪರಹಾರ ನೀಡುವುದಾಗಿ ತಿಳಿಸಿದರು.
ಮದ್ಯದಂಗಡಿ ಬಂದ್: ಸಂಜೆ ಸಮಯದಲ್ಲಿ ಇನ್ನಷ್ಟು ರೈತರಿಂದ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಅರಿತ ಸಿಪಿಐ ಭಾಗ್ಯವತಿ ಪಟ್ಟಣದಲ್ಲಿರುವ ಎಲ್ಲ ಮದ್ಯದಂಗಡಿಗಳ ಮಾರಾಟ ಸ್ಥಗಿತಗೊಳಿಸಿದರು. ಪಟ್ಟಣದಲ್ಲಿ ಸುಮಾರು 20 ಕ್ಕೂ ಹೆಚ್ಚು ಮದ್ಯದಂಗಡಿಗಳಿದ್ದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮುಂಜಾ ಗ್ರತಾ ಕ್ರಮವಾಗಿ ಎಲ್ಲ ಮದ್ಯದಂಗಡಿಗಳನ್ನು ಸ್ಥಗಿತಗೊಳಿಸಿದರು.

Leave a Comment