ಹೆಂಗಳೆಯರ ಅಚ್ಚುಮೆಚ್ಚಿನ ಗೌರಿ ಹಬ್ಬ

ಬೆಂಗಳೂರು, ಸೆ ೧೧- ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯ ದಿ ಬರುವ ಗೌರಿ ಹಬ್ಬವನ್ನು ಇಂದು ರಾಜ್ಯದೆಲ್ಲೆಡೆ ಮತ್ತೈದೆಯು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಗೌರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗೌರಿ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ ಮುತ್ತೈದೆಯರು ಮಾಡುವ ಹಬ್ಬ ಇದು. ಸಕಲ ಸೌಭಾಗ್ಯಕ್ಕೆ ಪ್ರಾರ್ಥನೆ ಮಾಡಿ ಈ ಹಬ್ಬ ಮಾಡಲಾಗುತ್ತದೆ. ಸ್ವರ್ಣ ಗೌರಿ ವೃತದ ಮೂಲಕ ಆಚರಣೆ ಮಾಡಲಾಗುತ್ತದೆ. ಇಂದು ಬೆಳಿಗ್ಗೆ ಬೇಗ ಎದ್ದು ತಲೆ ಸ್ನಾನ ಮಾಡಬೇಕು. ನಂತರ ಮಡಿ ಬಟ್ಟೆಯುಟ್ಟು ಅರಿಶಿನಕ್ಕೆ ಹಾಲು ಹಾಕಿ ಗೋಪುರ ಮಾಡಿಕೊಂಡ ಗೌರಮ್ಮನಿಗೆ ಪೂಜಿ ಸಲ್ಲಿಸಿ ಮಹಿಳೆಯರು ಪುನೀತರಾದರು. ಇದನ್ನು ಅರಿಶಿನದ ಗೌರಮ್ಮ ಎನ್ನುತ್ತಾರೆ.

ಜಲ ಗೌರಿ ಪೂಜೆ ಕೂಡ ಮಾಡಬಹುದು. ಬಿದಿರಿನ ಮೊರ, ಬಾಳೆ ಎಲೆ, ಅಕ್ಕಿ ೧ ಕಪ್, ತೊಗರಿಬೇಳೆ ೧ ಕಪ್, ಉದ್ದಿನ ಬೇಳೆ ೧ ಕಪ್, ಕಡಲೆಬೇಳೆ ೧ ಕಪ್, ಹೆಸರು ಬೇಳೆ ೧ ಕಪ್, ಗೋಧಿ ೧ ಕಪ್, ಅಚ್ಚು ಬೆಲ್ಲ ೧ ಕಪ್, ಕಲ್ಲುಪ್ಪು ೧, ಹುಣಸೆಹಣ್ಣು ಸ್ವಲ್ಪ, ಅರಿಶಿನ, ಕುಂಕುಮ, ಅರಿಶಿನ ಕೊಂಬು, ಬ್ಲೌಸ್ ಪೀಸ್, ತೆಂಗಿನಕಾಯಿ, ಹಣ್ಣು, ಎಲೆ, ಅಡಿಕೆ, ಹಣ, ಕರಿಮಿಣಿ ಸೇರಿಸಿ ಬಾಗಿನ ಮಾಡಬೇಕು. ನಂತರ ಪದ್ಧತಿಯಂತೆ ಪೂಜೆ ಮಾಡವುದು ವಾಡಿಕೆ.

ಗಣೇಶ ಮನೆಗೆ ಬರುವ ಮೊದಲೇ ಗೌರಿ ಮನೆ ಪ್ರವೇಶ ಮಾಡಿರುತ್ತಾಳೆ. ಮೊದಲು ಗಣೇಶನ ತಾಯಿ ಗೌರಿಗೆ ಪೂಜೆ ನಡೆಯುತ್ತದೆ. ಮರುದಿನ ಗಣೇಶನ ಪೂಜೆ ಮಾಡಲಾಗುತ್ತದೆ. ಮಹಿಳೆಯರು ಗೌರಿಯನ್ನು ಮನೆಗೆ ತಂದು, ಬಾಳೆ ದಿಂಡು, ಮಾವಿನ ಎಲೆ, ಹೂಗಳ ಮೂಲಕ ಮಂಟಪ ನಿರ್ಮಾಣ ಮಾಡಿ ಗೌರಿಯನ್ನು ಪೂಜೆ ಮಾಡುತ್ತಾರೆ. ಗೌರಿ ಹಬ್ಬದಂದು ಗೃಹಿಣಿ ತನ್ನ ತವರಿಗೆ ಹೋಗುವ ಪದ್ಧತಿಯೂ ಅನೇಕ ಕಡೆಗಿದೆ. ಗೌರಿ ಪೂಜೆ ಮಾಡಿದ್ರೆ ಮಾಂಗಲ್ಯ ಗಟ್ಟಿಯಾಗಿರುತ್ತದೆ ಎಂಬುದು ಜನರ ನಂಬಿಕೆ. ಪೂಜೆ ನಂತ್ರ ಅಕ್ಕಪಕ್ಕದ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ನೀಡುವ ಪದ್ಧತಿಯಿದೆ.

Leave a Comment