’ಹೃದಯ’ ಗೆಲ್ಲುವ ತವಕ ೧೧ ವರ್ಷಗಳ ಬಳಿಕ ಪುನರಾಗಮನ

’ಒರಟ ಐ ಲವ್ ಯೂ’ ಚಿತ್ರ ತೆರೆ ಕಂಡ ಬಳಿಕ ತೆರೆ ಮರೆಗೆ ಸರಿದಿದ್ದ ನಟಿ ’ಸೌಮ್ಯ’ ಈಗ ’ಹೃದಯ’ ಗೆಲ್ಲಲು ಹನ್ನೊಂದು ವರ್ಷಗಳ ಬಳಿಕ ಗಾಂಧಿನಗರಕ್ಕೆ ಪುನರಾಗಮನ ಮಾಡಿದ್ದಾರೆ.

ಸೌಮ್ಯ ತಮ್ಮ ಹೆಸರನ್ನು ’ಹೃದಯ’ ಎಂದು ಬದಲಾಯಿಸಿಕೊಂಡು ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ. ಹಾಗೆ ನೋಡಿದರೆ ಅವರ ಮೊದಲ ಹೆಸರೇ ಹೃದಯ. ತೆರೆ ಕಾಣಲು ಸಿದ್ದವಾಗಿರುವ ’ತ್ರಾಟಕ’ದಲ್ಲಿ ನಾಯಕಿಯಾಗುವ ಮೂಲಕ ಚಿತ್ರರಂಗದಲ್ಲಿಯೇ ಗುರುತಿಸಿಕೊಳ್ಳುವ ಹುಮ್ಮಸ್ಸು, ಆಸೆಯಿಂದ ಚಿತ್ರರಂಗಕ್ಕೆ ಪ್ರವೇಶಿಸಿದ್ಧಾರೆ.
’ಒರಟ ಐ ಲವ್ ಯೂ’ ಚಿತ್ರ ಮಾಡುವಾಗ ನಾನಿನ್ನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಆಟ ಆಡುವ ಸಮಯದಲ್ಲಿ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಯಾವುದೇ ನಟನೆಯ ಗಂಧ ಗಾಳಿ ಇರಲಿಲ್ಲ. ನಟಿಸಿದೆ., ಚಿತ್ರಕ್ಕೆ ಮತ್ತು ನನ್ನ ಪಾತ್ರಕ್ಕೆ ಮೆಚ್ಚುಗೆಯೂ ಸಿಕ್ಕಿತು. ಚಿತ್ರ ಬಿಡುಗಡೆಯಾಗಿ ಯಶಸ್ವಿಯೂ ಆಯಿತು. ಅದ್ಯಾಕೋ ಚಿತ್ರರಂಗದ ಬಗ್ಗೆ ನನಗೇ ಆಸಕ್ತಿ ಇರಲಿಲ್ಲ. ಓದುವ ಕಡೆ ಗಮನ ಹರಿಸಿದ್ದೆ. ಈಗ ಹಾರ್ಡ್‌ವೇರ್ ಇಂಜಿನಿಯರ್ ಮುಗಿಸಿದ್ದೇನೆ. ’ತ್ರಾಟಕ’ದಲ್ಲಿ ಅಚಾನಕ್ ಆಗಿ ನಟಿಸುವ ಅವಕಾಶ ಒದಗಿ ಬಂದಿದೆ. ಇನ್ನು ಮುಂದೆ ಚಿತ್ರರಂಗದಲ್ಲಿಯೇ ನೆಲೆಯೂರಬೇಕೆನ್ನುವ ಆಸೆ ಹಿಮ್ಮಡಿಯಾಗಿದೆ ಎಂದು ಹೇಳಿಕೊಂಡರು ಹೃದಯ.
ಬಹಳ ವರ್ಷಗಳ ಬಳಿಕ ಪತ್ರಕರ್ತರ ಮುಂದೆ ಎದುರಾಗಿದ್ದ ಅವರು, ಮೊದಲ ಚಿತ್ರದಲ್ಲಿ ನಟಿಸುವಾಗ ಡುಮ್ಮಿಯಾಗಿದ್ದೆ. ಈಗ ಸಣ್ಣನಾಗಿದ್ದೇನೆ. ಯಾವ ಆಹಾರ ಪದಾರ್ಥ ತಿನ್ನಬೇಕು ತಿನ್ನಬೇಡ ಎನ್ನುವ ಅರಿವಿದೆ. ಹಾಗಾಗಿ ಸಣ್ಣವಾಗಿದ್ದೇನೆ. ಈ ನಡುವೆ ಕನ್ನಡಲ್ಲಿ ಒಂದಷ್ಟು ಚಿತ್ರಗಳ ಮಾತುಕತೆಯಾಗಿದೆ. ಇನ್ನೂ ಯಾವುದೂ ಅಂತಿಮವಾಗಿಲ್ಲ. ಆದರೆ ತಮಿಳಿನಲ್ಲಿ ಚಿತ್ರದ ಅವಕಾಶ ಬಂದಿದೆ. ಚಿತ್ರೀಕರಣದ ದಿನಾಂಕ ಸದ್ಯದಲ್ಲಿಯೇ ನಿಗಧಿಯಾಗುವ ಸಾಧ್ಯತೆಗಳಿವೆ.
ಕನ್ನಡದ ಹುಡುಗಿಯಾಗಿ ಕನ್ನಡದ ಸಿನಿಮಾಗಳಲ್ಲಿಯೇ ಹೆಚ್ಚು ಹೆಚ್ಚಾಗಿ ನಟಿಸಬೇಕು ಎನ್ನುವ ಆಸೆ ಇದೆ. ಹಾರ್ಡ್‌ವೇರ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ ನಂತರ ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆನ್ನುವ ಹಂಬಲ ಹೆಚ್ಚಾಯಿತು. ಚಿತ್ರರಂಗದಲ್ಲಿ ನಟಿಸುವ ಉತ್ಸುಕತೆ ಇದ್ದರೂ ಯಾರನ್ನೂ ಕೇಳಿ ಅವಕಾಶ ಪಡೆಯುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಯಾವುದೇ ಸಿನಿಮಾಗಳಲ್ಲಿಯೂ ಅವಕಾಶ ಸಿಗಲಿಲ್ಲ. ಇನ್ನು ಮುಂದೆ ಸಂಪೂರ್ಣ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ.
ಸಿನಿಮಾದಲ್ಲಿ ಹೆಚ್ಚು ಹೆಚ್ಚಾಗಿ ನಟಿಸಲು ನಿರ್ಧರಿಸಿದ್ದು ತಾವೇ ನಿರ್ಮಾಣ ಮಾಡುತ್ತೇನೋ ಇಲ್ಲವೋ ಬೇರೆಯವರು ನಿರ್ಮಾಣ ಮಾಡುತ್ತಾರೆ. ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಉದ್ದೇಶವಿದೆ.ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.

ಹನ್ನೊಂದು ವರ್ಷಗಳ ಬಳಿಕ ನಟಿ ಹೃದಯ ಮತ್ತೆ ಬಂದಿದ್ದಾರೆ. ಈ ಬಾರಿ ಕನ್ನಡದಲ್ಲಿ ಮೋಡಿ ಮಾಡುವ ಜೊತೆಗೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಉದ್ದೇಶವೂ ಇದೆ ಎನ್ನುತ್ತಾರೆ ಹೃದಯ.

Leave a Comment