ಹೃದಯಾಘಾತ: ಶಿಕ್ಷಕ ಸಾವು

ಮಧುಗಿರಿ, ಡಿ. ೮- ಏಕಶಿಲಾ ಬೆಟ್ಟವನ್ನು ಹತ್ತಲು ಬಂದಿದ್ದ ದ್ವಿತೀಯ ದರ್ಜೆ ಸಹಾಯಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪಟ್ಟಣದ ಏಕಶಿಲಾ ಬೆಟ್ಟದಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಅರಳಿಹಳ್ಳಿ ಗ್ರಾಮದ ನಿವಾಸಿ ತಿಪ್ಪೇಸ್ವಾಮಿ(28) ಎಂಬುವರೇ ಮೃತಪಟ್ಟಿರುವ ಶಿಕ್ಷಕ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು 50 ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆಂದು ಮಧುಗಿರಿಯ ಏಕಶಿಲಾ ಬೆಟ್ಟವನ್ನು ನೋಡಲು ಬಂದಿದ್ದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೆಟ್ಟವನ್ನು ಹತ್ತುತ್ತಿದ್ದ ವೇಳೆ ಶಿಕ್ಷಕ ತಿಪ್ಪೇಸ್ವಾಮಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸುದ್ದಿ ತಿಳಿದ ಕೂಡಲೇ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ರವಿಶಂಕರರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ಈ ಸಂಬಂಧ ಮಧುಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment