ಹೃದಯಸ್ಪರ್ಶೀ ಸಾಧನ ಸಂಗಮ- ದಸರಾ ‘’ರಸೋತ್ಸವ”

 -ವೈ.ಕೆ.ಸಂಧ್ಯಾ ಶರ್ಮ

ನಾಟ್ಯ ಕಲಾವಿಶಾರದೆ, ನಾಟ್ಯಾಚಾರ್ಯ ಶ್ರೀಮತಿ ಜ್ಯೋತಿ ಪಟ್ಟಾಭಿರಾಮ್ ಅವರದು ನೃತ್ಯಕ್ಷೇತ್ರದ ಸಾಧಕರ ಪಟ್ಟಿಯಲ್ಲಿ ಮಹತ್ವದ ಹೆಸರು. ಸಾವಿರಾರು ವಿದ್ಯಾರ್ಥಿಗಳನ್ನು ನೃತ್ಯಪಟುಗಳನ್ನಾಗಿ ತಯಾರು ಮಾಡಿದ ಹೆಮ್ಮೆ-ಧನ್ಯತಾಭಾವ ವ್ಯಕ್ತಪಡಿಸುವ ಈಕೆ ಸರಳ ನಡೆ-ನುಡಿಯ ನಿಗರ್ವಿ. ಭರತನಾಟ್ಯ-ಯೋಗ ಹಾಗೂ ಆಧ್ಯಾತ್ಮಿಕತೆಗಳ ಸಾಂಗತ್ಯದ ಅಪರೂಪದ ಕಲಾವಿದೆಯಾದ ಇವರು ವೃತ್ತಿಯಲ್ಲಿ ಪ್ರಾಧ್ಯಾಪಕಿಯಾದರೆ , ಪ್ರವೃತ್ತಿಯಿಂದ ನೃತ್ಯಕಲಾವಿದೆ, ನೃತ್ಯಸಂಯೋಜಕಿ ಹಾಗೂ ಆಧ್ಯಾತ್ಮಿಕ ತಳಹದಿಯ ಮೇಲೆ ಧ್ಯಾನ-ಯೋಗ-ಶ್ರೀವಿದ್ಯಾ ಸಾಧನೆಗಳ ಬೆಳಕಿನಲ್ಲಿ ನೃತ್ಯವನ್ನು ಆತ್ಮವಿದ್ಯೆಯಾಗಿ ಕಲಿಸುತ್ತಿರುವ ನೃತ್ಯಗುರು.

ಒಂದು ನೃತ್ಯಸಂಸ್ಥೆ ಸಾವಿರಾರು ಪ್ರತಿಭೆಗಳನ್ನು ಬೆಳೆಸುವ ಪವಿತ್ರ ತಾಣ. ಬೆಳೆಯುವ ಪೈರನ್ನು ಪೋಷಿಸಿ, ಅದು ನಳನಳಿಸಿ ಪುಷ್ಟವಾಗಿ -ಪ್ರಫುಲ್ಲವಾಗಿ ಮೈದಾಳುವಂತೆ ರೂಪಿಸುವ ಜವಾಬ್ದಾರಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಗುರುಗಳದಾಗಿರುತ್ತದೆ. ಈ ಮಾತಿಗೆ ಸಾಕ್ಷಿ ಬೆಂಗಳೂರಿನ ‘ಸಾಧನ ಸಂಗಮ ಡಾನ್ಸ್ ಸೆಂಟರ್’ ನ ವಿವಿಧ ಕ್ರಿಯಾಶೀಲ ಚಟುವಟಿಕೆಗಳು ಮತ್ತು ಬದ್ಧತೆಯಿಂದ ನಾಟ್ಯಶಿಕ್ಷಣ ನೀಡುತ್ತಿರುವ ನೃತ್ಯಗುರು ವಿದುಷಿ. ಜ್ಯೋತಿ ಪಟ್ಟಾಭಿರಾಮ್. ವರ್ಷವಿಡೀ ಒಂದಲ್ಲ ಒಂದು ಸೃಜನಾತ್ಮಕ ಪ್ರಯೋಗಗಳಿಂದ ನೃತ್ಯಾಕಾಂಕ್ಷಿಗಳನ್ನು, ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಿರುವ ‘’ಸಾಧನ ಸಂಗಮ ಟ್ರಸ್ಟ್’ ಒಂದು ‘ನೃತ್ಯ ವಿಶ್ವವಿದ್ಯಾಲಯ’ದಂತೆ ನಾಟ್ಯಸೇವೆಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿರುವುದು ಸ್ತುತ್ಯಾರ್ಹ.

d2
ಈ ನೃತ್ಯಸಂಸ್ಥೆ, ದಸರೆಯನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸುವ ಸತ್ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದು, ಈ ಸಲ ಮೂರುದಿನಗಳ ‘’ರಸೋತ್ಸವ” ವೈವಿಧ್ಯಪೂರ್ಣ ಕಾರ್ಯಕ್ರಮವನ್ನು ಸಾಧನ ಸಂಗಮದ ರಂಗೋಪನಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. ಪ್ರಾರಂಭಕ್ಕೆ ಸಂಸ್ಥೆಯ ಕಿರಿಯ ವಿದ್ಯಾರ್ಥಿನಿಯರು ‘ಗಣಪತಿ ಕೌತ್ವಂ’- ಪ್ರಣವಾಕಾರ ಸಿದ್ಧಿವಿನಾಯಕನನ್ನು ತಮ್ಮ ಸ್ಫುಟವಾದ ಆಂಗಿಕಾಭಿನಯದಲ್ಲಿ ಸುಂದರವಿನ್ಯಾಸಗಳಲ್ಲಿ ಗಣಪತಿಯನ್ನು ಕಣ್ಮುಂದೆ ತಂದು ನಿಲ್ಲಿಸಿದರು.
ಗುರು ಜ್ಯೋತಿಯವರ ಪರಿಕಲ್ಪನೆ-ನೃತ್ಯ ಸಂಯೋಜನೆಯ ‘’ನವವಿಧ ಭಕ್ತಿ”- ನೃತ್ಯರೂಪಕದ ಮುನ್ನುಡಿ ಭಾಗವನ್ನು ‘ನೃತ್ಯ ನಿಪುಣ’ ಹಿರಿಯ ವಿದ್ಯಾರ್ಥಿಗಳು ‘ ಶ್ರವಣಂ, ಕೀರ್ತನಂ. ಸ್ಮರಣಂ, ಪಾದಸೇವನಂ, ಅರ್ಚನಂ, ವಂದನಂ, ದಾಸ್ಯಂ, ಸಖ್ಯಂ, ಅರ್ಪಣಂ ಮತ್ತು ಆತ್ಮ ನಿವೇದನಂ’ ಹೀಗೆ ಭಕ್ತ್ಯಾರ್ಪಣೆಯ ನವವಿಧ ಆಯಾಮಗಳನ್ನು ಅನಾವರಣಗೊಳಿಸಿ ಮನಸೆಳೆವ ಸ್ವರಮಾಧುರ್ಯದ ನೃತ್ತಗಳಿಂದ ನವವಿಧ ಭಕ್ತಿಗೆ ಹೊನ್ನಕಳಶವಿಟ್ಟರು.
.
ಅನಂತರ ಖ್ಯಾತ ಕಲಾವಿದೆಯರಾದ ಶಮಾಕೃಷ್ಣ ಮತ್ತು ಅನುರಾಧಾ ವಿಕ್ರಾಂತ್ ಕೂಚಿಪುಡಿ ಮತ್ತು ಭರತನಾಟ್ಯದ ಜುಗಲ್ಬಂದಿ ‘ ನೃತ್ಯಮಿಲನ’ವನ್ನು ನಾಟ್ಯಶಾಸ್ತ್ರದ ಚಲನೆಗಳನ್ನಾಧರಿಸಿ ಸಾಮರಸ್ಯದಿಂದ ನಡೆಸಿಕೊಟ್ಟರು. ‘ಸ್ವರಾಂಜಲಿ’ಯಲ್ಲಿ ಗಣಪತಿಯ ಮಹಿಮೆಯನ್ನು ಹೊಂದಾಣಿಕೆಯ ನೃತ್ಯವೈಭವದಲ್ಲಿ ಮನೋಹರವಾಗಿ ಸಾದರಪಡಿಸಿದರು. ಕಲಾವಿದೆ ಅನುರಾಧ ‘ದೇವೀಕೃತಿ’ಯಲ್ಲಿ ಭಗವತಿಯ ದಿವ್ಯಭಂಗಿಗಳನ್ನು ಅನುಪಮವಾಗಿ ಕಟ್ಟಿಕೊಟ್ಟರು. ಅನಂತರ ಇಬ್ಬರೂ ಜುಗಲ್ಬಂದಿಯಲ್ಲಿ ಪ್ರಸ್ತುತಪಡಿಸಿದ ‘ನಾದಾ ತನುಮನಿಷಂ ಶಂಕರಂ’- ಕೃತಿ, ಪರಸ್ಪರ ಪೂರಕ ನರ್ತನದಿಂದ ಮುದತಂದಿತ್ತು. ರಾವಣ, ಕಠಿಣತಪಸ್ಸು ಮಾಡಿ, ಕರುಳಿನಿಂದ ಸಾಮಗಾನವನ್ನು ನುಡಿಸಿ ಆತ್ಮಲಿಂಗವನ್ನು ಪಡೆಯುವ ಪ್ರಸಂಗವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು. ಶಿವ-ಪಾರ್ವತಿಯರ ಅಭಿನಯ, ಲಾಸ್ಯದ ಬೆಡಗು ಗಮನ ಸೆಳೆಯಿತು. ಒಟ್ಟಾರೆ ಹಾಲು-ಜೇನು ಬೆರೆತಂತಿದ್ದ ಅವರಿಬ್ಬರ ಸಾಮರಸ್ಯದ ಮೆರುಗಿನ ನೃತ್ಯವಿಲಾಸ ಹೃದಯಂಗಮವಾಗಿತ್ತು. ಕನಕದಾಸರ ’ಬಾರೋ ಕೃಷ್ಣಯ್ಯ’ ದೇವರನಾಮದಲ್ಲಿ ಪೂರಕ ಪಾತ್ರಭಿನಯಗಳಿಂದ ರಮ್ಯ ನೃತ್ಯಲಾಸ್ಯಗಳಿಂದ ರಸಾನುಭವವನ್ನು ನೀಡಿದರು.
ಮುಂದೆ, ಮೋಹಕ ಶೈಲಿಯ ಪ್ರೌಢ ಅಭಿನಯಕ್ಕೆ ಹೆಸರಾದ ಖ್ಯಾತ ಭರತನಾಟ್ಯ ಕಲಾವಿದೆ ಐಶ್ವರ್ಯ ನಿತ್ಯಾನಂದ ಏಕವ್ಯಕ್ತಿ ಪ್ರದರ್ಶನದಲ್ಲಿ ಹಲವು ಕೃತಿಗಳನ್ನು ಮನೋಜ್ಞವಾಗಿ ನರ್ತಿಸಿ ಹೃದಯಸ್ಪರ್ಶಿಸಿದರು. ಧೀರೋದಾತ್ತ ಆಂಗಿಕ ಚಲನೆಯ ರುದ್ರನರ್ತನದ ‘ಶಿವಕೃತಿ’ಯಲ್ಲಿ ದೈವೀಕತೆ ತಾಂಡವವಾಡಿತು. ಅಂಗಶುದ್ದಿಯ ನೃತ್ತ ಝೇಂಕಾರದಲ್ಲಿ ಆನಂದತಾಂಡವನ ವಿಶಿಷ್ಟ ಭಂಗಿಗಳು ಶಿಲ್ಪಸದೃಶವಾಗಿ ಒಡಮೂಡಿದವು. ಸುಂದರ ಕರಣಗಳು ಕಣ್ಮನ ಸೂರೆಗೊಂಡರೆ, ಲೀಲಾಜಾಲ ಆಕಾಶಚಾರಿ, ಭ್ರಮರಿಗಳು, ಮಂಡಿ ಅಡವುಗಳಿಂದ ಕೂಡಿದ ಕಲಾವಿದೆಯ ಚೈತನ್ಯಪೂರ್ಣ ಸಮರ್ಥನರ್ತನ ವಿಸ್ಮಯಗೊಳಿಸಿತು. ತೇಜಃಪೂರಿತ ಕಣ್ಣೋಟ ಶಿವಾರ್ಚನೆಗೈದಿತು.
ವೀರಾವೇಶ ರುದ್ರಭಾವದ ತನ್ಮಯತೆಯಿಂದ ರಂಗದ ತುಂಬಾ ಧ್ಯಾನಸ್ಥವಾಗಿ ಚಲಿಸಿದ ಕಲಾವಿದೆಯ ತನು, ಮುಂದಿನ ಕೃತಿಯಲ್ಲಿ ಅಚ್ಚರಿ ಮೂಡಿಸುವ ರೀತಿಯಲ್ಲಿ ಶೃಂಗಾರ ಲಾಸ್ಯಭಾವದಿಂದ ಮೃದುವಾಯಿತು. ರಾತ್ರಿ ಅಪವೇಳೆಯಲ್ಲಿ ಮನೆಗೆ ಬಂದು ಕಾಡುವ ಪ್ರಿಯ ಕೃಷ್ಣನ ಒಡನಾಟಕ್ಕೆ ಒಳಗೆ ಹಾತೊರೆಯುತ್ತಿದ್ದ ನಾಯಕಿ, ಬಹಿರಂಗದಲ್ಲಿ ಮಾತ್ರ ಅವನನ್ನು ನಿರಾಕರಿಸಿ ಹೊರದೂಡುವ ನಾಟಕಾಭಿನಯದಲ್ಲಿ ಶೃಂಗಾರಲೇಪಿತ ಹರ್ಷದ ಸಿಂಚನಗೈದಿತು. ಇಲ್ಲಿ ಕಲಾವಿದೆಯ ನವಿರಾದ ಸಾತ್ವಿಕಭಿನಯ ಮೆರುಗು ಪಡೆಯಿತು. ‘ಸದ್ದು ಮಾಡಬೇಡವೋ ರಂಗಯ್ಯ’-ಶ್ರೀಪಾದರಾಜರ ಕೀರ್ತನೆಗೆ ಜೀವತುಂಬಿ ತನ್ನ ಸೂಕ್ಷ್ಮಾಭಿನಯದ ನೆಲೆಗಳಲ್ಲಿ ರಸಿಕರನ್ನು ಪರಾಕಾಷ್ಟತೆಗೊಯ್ದಳು ಕಲಾವಿದೆ.
ಮುಂದಿನ ಕೃತಿ ‘ಯಮನೆಲ್ಲಿ ಕಾಣನೆಂದು ಹೇಳಬೇಡ’- ಪುರಂದರದಾಸರ ‘ಅದ್ವೈತ’ಭಾವದ ಧ್ವನ್ಯಾರ್ಥದ ಕೃತಿಯ ಸಾರಸರ್ವಸ್ವವನ್ನು ಪರಿಪೂರ್ಣವಾಗಿ ಅನಾವರಣಗೊಳಿಸಿದಳು ಕಲಾವಿದೆ. ಕರುಣೆಯಿಂದ ಕಾಯುವ ಶ್ರೀರಾಮ ಮತ್ತು ಶಿಕ್ಷೆಯ ಪ್ರತಿರೂಪವಾಗಿ ಕ್ರೂರನಾಗಿ ಕಾಣುವ ಯಮ ಇಬ್ಬರೂ ಬೇರೆಬೇರೆಯಲ್ಲ, ಅವರಿಬ್ಬರೂ ಒಬ್ಬರೇ, ಅಭಿನ್ನರು. ದುಷ್ಟ ಶಿಕ್ಷೆ, ಶಿಷ್ಟ ರಕ್ಷೆಗಾಗಿ ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುವ ಏಕಶಕ್ತಿ ಎಂಬ ದಿವ್ಯ ಸಂದೇಶವನ್ನು ನೀಡುವ ಕೃತಿಯನ್ನು ಐಶ್ವರ್ಯ, ಎಳೆಎಳೆಯಾಗಿ ಬಿಚ್ಚಿಟ್ಟಳು. ನಂಬಿದ ಪ್ರಹ್ಲಾದನಿಗೆ ‘ಹರಿ’ಯಾಗಿ ಕಾಪಾಡಿದ ರಾಮ, ನಂಬದ ಹಿರಣ್ಯಕಶಿಪುವಿಗೆ ‘ಅರಿ’ಯಾದ ಎಂಬ ಪ್ರಸಂಗವನ್ನು ಕಲಾವಿದೆ ತನ್ನ ಶಕ್ತಾಭಿನಯದಿಂದ ಮನತಟ್ಟುವಂತೆ ಪುನರ್ನಿರ್ಮಿಸಿ ರೋಮಾಂಚಗೊಳಿಸಿದಳು. ನರಸಿಂಹನಾಗಿ ಆರ್ಭಟಿಸಿದ ದೃಶ್ಯವಂತೂ ಅತ್ಯಮೋಘ!!. ಚಪ್ಪಾಳೆಗಳ ಸುರಿಮಳೆಯಿಂದ ಅವಳಿಗೆ ಮೆಚ್ಚುಗೆಯ ವರ್ಷ. ನಂಬಿದ ಅರ್ಜುನನಿಗೆ ಮಿತ್ರನಾದವನೇ ನಂಬದ ದುರ್ಯೋಧನನನಿಗೆ ಶತ್ರುವಾದ ಬಗೆಯನ್ನು ಸೊಗಸಾಗಿ ನಿರೂಪಿಸಿದಳು. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಸಾರಥಿಯಾದ ಶ್ರೀಕೃಷ್ಣ, ಬಂಧು-ಬಾಂಧವರನ್ನು ಕೊಲ್ಲಲು ನಿರಾಕರಿಸಿ ವಿಪ್ಲವತೆಗೊಳಗಾದ ಅವನಿಗೆ, ವಿಷಾದಯೋಗವನ್ನು ಬೋಧಿಸಿದ ಘಟ್ಟದಲ್ಲಿ ನೋಡುಗರ ಹೃದಯಗಳು ಕಲಕಿದವು. ಗೀತೋಪದೇಶ ಮತ್ತು ವಿಶ್ವರೂಪ ದರ್ಶನದ ಚಿತ್ರಣವನ್ನು ಕಲಾವಿದೆ, ತನ್ನ ಪಕ್ವಾಭಿನಯದ ತಾದಾತ್ಮ್ಯದಿಂದ ಪಾತ್ರಗಳಲ್ಲಿ ‘ಪರಕಾಯ ಪ್ರವೇಶ’ ಮಾಡಿ, ತಾನೊಬ್ಬ ಅದ್ವಿತೀಯ ಕಲಾವಿದೆ ಎಂಬುದನ್ನು ಸಾಬೀತು ಮಾಡಿದಳು.
**********************

Leave a Comment