ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ನಾಗೇಶ ಕಲಬುರ್ಗಿ ಅಧಿಕಾರ ಸ್ವೀಕಾರ

ಹುಬ್ಬಳ್ಳಿ,ಫೆ.28: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ತಲೆ ಎತ್ತುತ್ತಿರುವ ಅಕ್ರಮ ವಸತಿ ವಿನ್ಯಾಸಗಳ ಪಟ್ಟಿ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಿ,ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.
ನಗರದ ಹುಬ್ಬಳ್ಳಿ – ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಧಿಕಾರ ವಹಿಸಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ಸಾರ್ವಜನಿಕರು ಕ್ರಮಬದ್ಧವಾಗಿರುವ ನಿವೇಶನಗಳನ್ನೇ ಖರೀದಿಸಬೇಕು. ಹಂಚಿಯಾಗದಿರುವ ಪ್ರಾಧಿಕಾರದ ನಿವೇಶನಗಳ ಹಂಚಿಕೆಗೆ ಆದ್ಯತೆ ನೀಡಲಾಗುವುದು ಎಂದರು.
ಈ ಹಿಂದೆ 2001ರಲ್ಲಿ ಮಹಾನಗರಪಾಲಿಕೆ  ಹಾಗೂ 2009 ರಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ಕಾರ್ಯನಿರ್ವಹಿಸಿದ ಅನುಭವ ತಮಗಿದೆ.ಅನಧಿಕೃತ ವಸತಿ ವಿನ್ಯಾಸಗಳ ಪಟ್ಟಿ ಮಾಡಿ ಅವುಗಳ ನಿಯಂತ್ರಣಕ್ಕೆ ಅಧಿಕಾರಿಗಳ ತಂಡ ರಚಿಸಲಾಗುವುದು ಎಂದು ತಿಳಿಸಿದರು.
ಅವಳಿ ನಗರದ ವಸತಿ ವಿನ್ಯಾಸಗಳಲ್ಲಿ ಹಂಚಿಕೆಯಾಗದೇ ಉಳಿದಿರುವ ನಿವೇಶನಗಳ ಹಂಚಿಕೆಗೆ ಒಂದು ತಿಂಗಳೊಳಗಾಗಿ ಕ್ರಮ ಕೈಗೊಳ್ಳಲಾಗುವುದು. ಗುಂಪು ಮನೆಗಳ ಯೋಜನೆಯಡಿ ವಸತಿಗೃಹಗಳ ನಿರ್ಮಾಣಕ್ಕೆ ಸರ್ಕಾರ 2016 ರಲ್ಲಿ ಅನುಮತಿ ನೀಡಿದೆ, ಈ ಕಾರ್ಯ ಚುರುಕುಗೊಳಿಸಲಾಗುವುದು.
ರೈತರ ಜೊತೆ ಮಾತುಕತೆ ನಡೆಸಿ ಶೇ 50: 50 ರ ಅನುಪಾತದಲ್ಲಿ 8 ರಿಂದ 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು ವಿವಿಧ ವಸತಿ ವಿನ್ಯಾಸಗಳಲ್ಲಿ ನಾಗರಿಕ ಉದ್ದೇಶಕ್ಕೆ ಮೀಸಲಾಗಿರುವ ನಿವೇಶನಗಳನ್ನು ಅರ್ಹ ಉತ್ತಮ ಸಂಘ ಸಂಸ್ಥೆಗಳಿಗೆ ಒದಗಿಸಲಾಗುವುದು.ನೊಂದ ಜನರ ಕಣ್ಣೀರು ಒರೆಸುವ ಸದವಕಾಶ ಇದಾಗಿದ್ದು, ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದರು.
ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಅವರ ಸಮ್ಮುಖದಲ್ಲಿ , ಅಧ್ಯಕ್ಷರ ಕೊಠಡಿಯಲ್ಲಿ ಪೂಜೆ ನೆರವೇರಿಸಿ ನಾಗೇಶ ಕಲಬುರ್ಗಿ ಅಧಿಕಾರ ಸ್ವೀಕರಿಸಿದರು.
ಹುಡಾ ಆಯುಕ್ತ ಎನ್.ಹೆಚ್‌.ಕುಮ್ಮಣ್ಣವರ , ಮಾಜಿ ಶಾಸಕ ಅಶೋಕ ಕಾಟವೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Leave a Comment