ಹುಳಿಯಾರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಹುಳಿಯಾರು, ನ. ೨೧- ಕನಕದಾಸ ವೃತ್ತ ಎಂದು ಮರು ನಾಮಕರಣ ಮಾಡಲು ಆಗ್ರಹಿಸಿ, ಕುರುಬ ಸಮುದಾಯದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರ ಬಗ್ಗೆ ಸಚಿವ ಮಾಧುಸ್ವಾಮಿಯವರು ಹಗುರವಾಗಿ ಮಾತನಾಡಿರುವುದನ್ನು ವಿರೋಧಿಸಿ ಮತ್ತು ಅವರ ರಾಜೀನಾಮೆಗೆ ಒತ್ತಾಯಿಸಿ ಕುರುಬ ಸಂಘಟನೆ ಇಂದು ಕರೆ ನೀಡಿದ್ದ ಹುಳಿಯಾರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಂದು ಬೆಳಿಗ್ಗೆಯಿಂದಲೇ ಹುಳಿಯಾರು ಪಟ್ಟಣದಲ್ಲಿ ಕುರುಬ ಸಂಘಟನೆಯ ಪದಾಧಿಕಾರಿಗಳು ಮಾಜಿ ಶಾಸಕ ಸಿ.ಬಿ. ಸುರೇಶ್‌ಬಾಬು ನೇತೃತ್ವದಲ್ಲಿ ರಸ್ತೆಗಿಳಿದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟಿಸಿ ಶಾಂತಿಯುತವಾಗಿ ಬಂದ್ ಆಚರಿಸಲಾಯಿತು.
ಕುರುಬ ಸಂಘಟನೆ ಇಂದು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ವರ್ತಕರು ಸ್ವಯಂ ಪ್ರೇರಿತರಾಗಿಯೇ ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಅಂಗಡಿ ಮುಂಗಟ್ಟುಗಳ ಬಾಗಿಲು ಬಂದ್ ಮಾಡುವಂತೆ ಕುರುಬ ಸಂಘಟನೆ ವತಿಯಿಂದ ಮನವಿ ಮಾಡಲಾಗಿತ್ತು. ಆದರೆ ಕೆಲ ವರ್ತಕರು ಸ್ವಯಂ ಪ್ರೇರಿತರಾಗಿಯೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರೆ, ಇನ್ನು ಕೆಲವು ಅಂಗಡಿಗಳ ಮಾಲೀಕರು ತಮ್ಮ ವ್ಯಾಪಾರ ವಹಿವಾಟನ್ನು ನಿಲ್ಲಿಸದೆ ಎಂದಿನಂತೆ ಮುಂದುವರೆಸಿದ್ದರು. ಇದನ್ನು ಕಂಡ ಸಂಘಟನೆಯ ಪದಾಧಿಕಾರಿಗಳು ತೆರೆದಿದ್ದ ಅಂಗಡಿಗಳ ಬಳಿ ತೆರಳಿ ಬಾಗಿಲು ಮುಚ್ಚಿಸಿದ ದೃಶ್ಯಗಳು ಕಂಡು ಬಂದವು.
ಹುಳಿಯಾರಿನಲ್ಲಿ ಬಸ್‌ಗಳು, ಆಟೋ ರಿಕ್ಷಾಗಳ ಸೇರಿದಂತೆ ಎಲ್ಲ ವಾಹನಗಳ ಸಂಚಾರವೂ ಬೆಳಿಗ್ಗೆ 11 ಗಂಟೆಯವರೆಗೂ ಎಂದಿನಂತಿತ್ತಾದರೂ 11 ಗಂಟೆಯ ನಂತರ ಬಸ್‌ಗಳ ಸಂಚಾರವೂ ವಿರಳವಾಗಿತ್ತು.
ಉಳಿದಂತೆ ತುರ್ತು ಸೇವೆಗಳಾಗ ಆಸ್ಪತ್ರೆ, ಕ್ಲಿನಿಕ್‌ಗಳು, ಔಷಧಿ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಆದರೆ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಬಂದ್ ಹಿನ್ನೆಲೆಯಲ್ಲಿ ಹುಳಿಯಾರು ಪಟ್ಟಣದ ಪ್ರಮುಖ ರಸ್ತೆಗಳು, ಬಡಾವಣೆಗಳು ಸ್ತಬ್ದಗೊಂಡಿದ್ದವು.
ಮಾಜಿ ಶಾಸಕ ಸಿ.ಬಿ. ಸುರೇಶ್‌ಬಾಬು ನೇತೃತ್ವದಲ್ಲಿ ದುರ್ಗಪರಮೇಶ್ವರಿ ದೇವಾಲಯದ ಬಳಿ ರಸ್ತೆತಡೆ ಚಳವಳಿ ನಡೆಸಿದ ಪ್ರತಿಭಟನಾಕಾರರು, ವಿವಾದಿತ ಸ್ಥಳದಲ್ಲೇ ಕನಕದಾಸರ ನಾಮಫಲಕ ಹಾಕಲೇಬೇಕು. ಈ ನಾಮಫಲಕವನ್ನು ತೆರವುಗೊಳಿಸಿದ ತಹಶೀಲ್ದಾರ್‌ರವರೇ ಸ್ಥಳಕ್ಕಾಗಮಿಸಿ ನಾಮಫಲಕ ಹಾಕಿದರೆ ಮಾತ್ರ ಪ್ರತಿಭಟನೆ ಕೈ ಬಿಡುವುದಾಗಿ ಹೇಳಿದರು.
ಆದರೆ ಸಚಿವ ಮಾಧುಸ್ವಾಮಿ ರಾಜೀನಾಮೆ ಪಡೆಯಲೇಬೇಕು ಎಂಬ ಪಟ್ಟನ್ನು ಸಡಿಲಿಸದ ಪ್ರತಿಭಟನಾಕಾರರು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆ ಮುಂದೆ ಧರಣಿ ನಡೆಸುವುದಾಗಿಯೂ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಸುರೇಶ್‌ಬಾಬು ಮಾತನಾಡಿ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಈ ಹೋರಾಟ ನಡೆಯುತ್ತಿದ್ದು, ಶಾಂತಿಯುತವಾಗಿ ಬಂದ್ ಆಚರಿಸಲಾಗುತ್ತಿದೆ. ಈ ಹೋರಾಟಕ್ಕೆ ಯಾರೂ ಸಹ ಪ್ರಚೋದಿಸಿಲ್ಲ. ಎಲ್ಲರೂ ಸ್ವಯಂ ಪ್ರೇರಿತರಾಗಿಯೇ ಹೋರಾಟಕ್ಕೆ ಧುಮುಕ್ಕಿದ್ದಾರೆ. ನಮ್ಮ ಹೋರಾಟ ಶಾಂತಿಯುತವಾಗಿರುತ್ತದೆ ಎಂದರು.
ದುರ್ಗಪರಮೇಶ್ವರ್ ದೇವಾಲಯದ ಬಳಿಯಿಂದ ಮೆರವಣಿಗೆ ಮೂಲಕ ಪೊಲೀಸ್ ಠಾಣೆವರೆಗೆ ಆಗಮಿಸಿದ ಪ್ರತಿಭಟನಾಕಾರರು ಪೊಲೀಸ್ ಠಾಣೆ ಮುಂದೆ ಕೆಲ ಹೊತ್ತು ಧರಣಿ ನಡೆಸಿದರು.
ಕುರುಬ ಸಮುದಾಯದ ಮುಖಂಡ ವೈ.ಸಿ. ಸಿದ್ದರಾಮಯ್ಯ ಮಾತನಾಡಿ, 2006 ರಲ್ಲಿ ಗ್ರಾ.ಪಂ. ಅನುಮೋದನೆ ಪಡೆದು ಶ್ರೀ ಕನಕದಾಸ ವೃತ್ತವೆಂದು ನಾಮಕರಣ ಮಾಡಿ ನಾಮಫಲಕ ಸಹ ಹಾಕಲಾಗಿತ್ತು. ಅಂದಿನಿಂದ ಇಂದಿನವರೆವಿಗೂ ಪ್ರತಿ ವರ್ಷದ ಕನಕ ಜಯಂತಿಯನ್ನು ಇಲ್ಲೇ ಆಚರಿಸಿಕೊಂಡು ಬರಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯ ಆಡಳಿತ ಮಾಹಿತಿ ಸಂಗ್ರಹಿಸದೆ ಏಕಾಏಕಿ ಸಭೆಗೆ ಬಂದು 15 ವರ್ಷಗಳಿಂದ ಅಲ್ಲಿನ ಕನಕ ವೃತ್ತವೆಂದು ಇರಲೇ ಇಲ್ಲ ಎಂದು ಸಚಿವರು ವಾದ ಮಾಡಿದರು. ಅಲ್ಲದೆ ತಮ್ಮ ವಾದಕ್ಕೆ ಕಟ್ಟು ಬಿದ್ದು ಪ.ಪಂ. ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯದೆ ಗೊಂದಲ ಮೂಡಿಸಿದರು. ಜತೆಗೆ ಕುರುಬ ಸಮುದಾಯದ ಸ್ವಾಮೀಜಿಯವರೊಂದಿಗೂ ಸಭ್ಯವಾಗಿ ನಡೆದುಕೊಳ್ಳದೆ ಅವಮಾನಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಚಿವ ಮಾಧುಸ್ವಾಮಿಯವರು ತಮ್ಮ ಧೋರಣೆಯನ್ನು ಬದಲಿಸಿಕೊಂಡು ಸ್ವಾಮೀಜಿಯವರ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ಕುರುಬ ಸಮುದಾಯದ ಮುಖಂಡರುಗಳು ಪಟ್ಟಣದಾದ್ಯಂತ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಅಸಮಾಧಾನ, ಆಕ್ರೋಶವನ್ನು ಹೊರ ಹಾಕಿದರು.
ಹುಳಿಯಾರು ಪಟ್ಟಣದಲ್ಲಿ ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Leave a Comment