ಹುಳಿಯಾರಿನಲ್ಲಿ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ

ಹುಳಿಯಾರು, ಆ. ೨೬- ಸುಮಂಗಲಿಯರ ಹಬ್ಬ ವರಮಹಾಲಕ್ಷ್ಮೀ ಹಬ್ಬವನ್ನು ಪಟ್ಟಣದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಲಾಯಿತು.

ಮನೆಗಳಲ್ಲಿ ಮುತ್ತೈದೆಯರು ಉಪವಾಸವಿದ್ದು, ಸಂಪ್ರದಾಯಕ್ಕನುಸಾರವಾಗಿ ಕಳಸವಿಟ್ಟು, ಅದಕ್ಕೆ ಲಕ್ಷ್ಮೀಯ ಮುಖಪದ್ಮವಿಟ್ಟು, ಸೀರೆಯುಡಿಸಿ ಮನೆಯಲ್ಲಿರುವ ಆಭರಣ ದೇವಿಗೆ ತೊಡಿಸಿ ಅಲಂಕರಿಸಿದ್ದರು. ಹಬ್ಬಕ್ಕೆಂದೆ ತಯಾರಿಸಿದ್ದ ಭಕ್ಷ್ಯ ಭೋಜ್ಯಗಳನ್ನು ದೇವಿಯ ಮುಂದಿಟ್ಟು ಪೂಜಿಸಿದರು. ಇನ್ನೂ ಕೆಲವರು ಲಕ್ಷ್ಮೀ ಫೋಟೋ ಮುಂದೆ ಹಣ್ಣು-ಕಾಯಿ ಇಟ್ಟು ಪೂಜಿಸಿದರು.

ಕೆಲವರ ಮನೆಯಲ್ಲಿ ಗಣಪತಿ ಪೂಜೆ, ಕಳಶ ಸ್ಥಾಪನೆ, ದ್ವಾರಪಾಲಕ ಪೂಜೆ, ಪೀಠಪೂಜೆ, ಪ್ರಾಣಪ್ರತಿಷ್ಠೆ, ಅಂಗಪೂಜೆ, ಪತ್ರಪೂಜೆ, ಪುಷ್ಪಪೂಜೆ ನೆರವೇರಿಸಿ ದೇವರಿಗೆ ನೈವೇದ್ಯ ಬಡಿಸಿದರು. ನಂತರ ಮುತ್ತೈದೆಯರು, ಹೆಂಗಳೆಯರು ಅಕ್ಕಪಕ್ಕದ ಮನೆಗಳಿಗೆ ತೆರಳಿ ಕರೆದು ಅರಿಶಿನ-ಕುಂಕುಮ, ಕುಪ್ಪಸ, ಬಳೆ ಸಹಿತ ಫಲತಾಂಬೂಲ ಪಡೆದು, ಅವರನ್ನೂ ಆಹ್ವಾನಿಸುವ ಸಡಗರದ ದೃಶ್ಯ ಗ್ರಾಮದಲ್ಲಿ ಸಾಮಾನ್ಯವಾಗಿತ್ತು.

ವರಮಹಾಲಕ್ಷ್ಮೀ ವ್ರತದ ಪ್ರಯುಕ್ತ ಗ್ರಾಮದೇವತೆಯಾದ ಶ್ರೀ ಹುಳಿಯಾರಮ್ಮ, ಶ್ರೀ ದುರ್ಗಮ್ಮ, ಶ್ರೀ ಬನಶಂಕರಮ್ಮ, ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ದೇವರುಗಳಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವರುಗಳ ದರ್ಶನ ಪಡೆದು ಹಣ್ಣುಕಾಯಿ ಮಾಡಿಸಿಕೊಂಡು ಹಿಂದಿರುಗುವ ಮೂಲಕ ಅರ್ಥ ಪೂರ್ಣವಾಗಿ ವರಮಹಾಲಕ್ಷ್ಮೀ ಹಬ್ಬ ಆಚರಿಸಿದರು.

Leave a Comment