ಹುಳಿಯಾರಿನಲ್ಲಿ ಅಂಗಾರಕ ಸಂಕಷ್ಟಹರದ ಚತುರ್ಥಿ ಆಚರಣೆ

ಹುಳಿಯಾರು, ಸೆ. ೧೩- ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಅಂಗಾರಕ ಸಂಕಷ್ಟಹರದ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.

ಸಂಕಷ್ಟಹರ ಚತುರ್ಥಿ ಅಂಗವಾಗಿ ಮುಂಜಾನೆ ಮಹಾ ಗಣಪತಿ ಪೂಜೆ, ಪುಣ್ಯಾಹ, ಕಳಸ ಸ್ಥಾಪನೆ, ದೇವನಾಂದಿ, ಪಂಚಾಮೃತಾಭಿಷೇಕ ಹಾಗೂ ಮಹಾಮಂಗಳಾರತಿ ಸಮರ್ಪಿಸಿದ ನಂತರ ಪ್ರಸಾದ ವಿತರಿಸಲಾಯಿತು. ಸಂಜೆ ಬೆಂಗಳೂರಿನ ನಾದಬಿಂದು ವಾದ್ಯಗೋಷ್ಠಿಯ ಸುರೇಶ್ ಶಾಸ್ತ್ರಿಯವರಿಂದ ಸುಗಮ ಸಂಗೀತ ನಡೆಯಿತು.

ಅಲ್ಲದೆ ಸಂಕಷ್ಟ ಚತುರ್ಥಿ ಅಂಗವಾಗಿ ಅರ್ಚಕ ರಾಜಣ್ಣ ಹಾಗೂ ಚೇತನ್ ಅವರು ಗಣಪತಿಗೆ ಹತ್ತಿಯಿಂದ ವಿಶೇಷ ಅಲಂಕಾರ ಮಾಡಿದ್ದರು. ಗಣೇಶನಿಗೆ ಅಭಿಷೇಕ, ಅರ್ಚನೆ ಹಾಗೂ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಕಥಾ ಪಠಣದ ನಂತರ ಅಘ್ರ್ಯಪ್ರದಾನ ಮಾಡಲಾಯಿತು.

ಸೇವಾಕರ್ತರಾದ ಪುಟ್ಟನಿಂಗೇಗೌಡ, ದೇವಾನಂದ್ ಕುಟುಂಬದವರು ಪ್ರಸಾದ ವ್ಯವಸ್ಥೆ ಮಾಡಿದ್ದರು. ದೇವಾಲಯ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್, ಹೂವಿನ ಬಸವರಾಜು, ವೆಂಕಟರಾಯ, ತಾಂಡವಾಚಾರ್, ಕಲಾವಿದ ಗೌಡಿ, ರಾಜೇಂದ್ರ, ತಮ್ಮಯ್ಯ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು ಸ್ವಾಮಿಯ ದರ್ಶನ ಪಡೆದು ಪುನೀತರಾದರು.

Leave a Comment