ಹುಳಿಮಾವು ಸಂತ್ರಸ್ತರ ಪುನರ್ವಸತಿಗೆ ಬಿಬಿಎಂಪಿ, ಬಿಡಿಎ ನಡುವೆ ಸಂಧಾನ ; ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ನ 27 -ಹುಳಿಮಾವು ಕೆರೆ ಕೋಡಿ ಒಡೆದ ಪರಿಣಾಮ ಸಂತ್ರಸ್ತರಾಗಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಡುವೆ ಮಧ್ಯಸ್ಥಿಕೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆಗಳನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಹುಳಿಮಾವು ಕೆರೆ ಕೋಡಿ ಒಡೆದಿರುವುದಕ್ಕೆ ಬಿಬಿಎಂಪಿ ಹಾಗೂ ಬಿಡಿಎ ಪರಸ್ಪರ ಹೊಣೆಗಾರರನ್ನಾಗಿಸುತ್ತಿದೆ. ಕೇವಲ ಆರೋಪಗಳಿಂದ ಪ್ರಯೋಜನವಿಲ್ಲ. ಸಂತ್ರಸ್ತರ ಪುನರ್ವಸತಿಯಲ್ಲಿ ಇಂತಹ ಗೊಂದಲ ಸರಿಯಲ್ಲ. ಘಟನೆಗೆ ನಿಖರ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬೇಕು. ಕಾರಣವನ್ನು ಮುಂದಿನ ವಿಚಾರಣಾ ದಿನದಂದು ತಿಳಿಸಬೇಕು. ಮತ್ತೊಮ್ಮೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು.

ಕೆರೆ ಕೋಡಿ ಒಡೆಯುವುದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಅರಿಯಲು ಹಾಗೂ ಭವಿಷ್ಯದಲ್ಲಿ ಈ ರೀತಿ ಆಗದಂತೆ ಕ್ರಮ ವಹಿಸಲು‌ ಅಗತ್ಯವೆನಿಸಿದರೆ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಸ್ಥೆ “ನೀರಿ” ಸಹಾಯ ಪಡೆಯಿರಿ ಎಂದು ನ್ಯಾಯಪೀಠ ಸಲಹೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೆರೆಗಳ ಬಗ್ಗೆ ದೂರು ನೀಡಲು ಸರ್ಕಾರದ ವೆಬ್‌ಸೈಟ್ ಇದೆ. ಆದರೆ, ಆ ವೆಬ್‌ಸೈಟ್ ಕಾರ್ಯ ನಿರ್ವಹಿಸುತ್ತಿಲ್ಲ. ಕೆರೆಗಳಿಗೆ ಸಂಬಂಧಿಸಿದ‌ ಶುಲ್ಕ ರಹಿತ ಕರೆ ಲೈನುಗಳು ರದ್ದಾಗಿವೆ. ವಾಟ್ಸ್‌‌ ಆ್ಯಪ್ ನಂಬರ್‌ ಕೂಡಾ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬಿಬಿಎಂಪಿ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ಕೆರೆ ಜಾಗ ಒತ್ತುವರಿಯಾಗಿರುವುದು ಕಂಡುಬಂದಿದೆ ಎಂದ ನ್ಯಾಯಪೀಠ, ಕೆರೆಗಳ‌ ಸಂರಕ್ಷಣೆಗಾಗಿ ರೂಪಿಸಿದ್ದ ಸಮಿತಿಯ ಕಾರ್ಯವೈಖರಿ ಸಮಾಧಾನಕರವಾಗಿಲ್ಲ. ಸಮಿತಿ 2019ರ ಜನವರಿ 1ರಿಂದ ಈತನಕ ಒಂದೇ ಒಂದು ಬಾರಿ ಸಭೆ ನಡೆಸಿದೆ.ಜಿಲ್ಲಾ ಮಟ್ಟದಲ್ಲಿ ಒಂದೂ ಸಭೆ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಜೊತೆಗೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ದ ಯಾಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಾರದು‌? ಎಂದು ಕೂಡ ಪ್ರಶ್ನಿಸಿತು.

ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಲಾಗಿದೆ.

Leave a Comment