ಹುಳಿಮಾವಿನಲ್ಲಿ ಶ್ರೀ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

ಬೆಂಗಳೂರು ದಕ್ಷಿಣ ತಾಲ್ಲೂಕು ಹುಳಿಮಾವು ದೇವಾಲಯಗಳ ತವರೂರು ಇಲ್ಲಿರುವ ಕೋದಂಡರಾಮಸ್ವಾಮಿ ದೇವಾಲಯದ ಸುತ್ತ ಮುತ್ತುರಾಯಸ್ವಾಮಿ, ಆಂಜನೇಯಸ್ವಾಮಿ, ಆಲದಮರದ ದೊಡ್ಡಮ್ಮದೇವಿ, ಶಂಭುಲಿಂಗೇಶ್ವರ ಸ್ವಾಮಿ, ವೆಂಕಟರಮಣಸ್ವಾಮಿ, ಸೋಮೇಶ್ವರ, ಭಗವತಿದೇವಿ, ಶಿರಡಿಸಾಯಿಬಾಬ, ಲಕ್ಷ್ಮೀನರಸಿಂಹಸ್ವಾಮಿ, ಶನಿದೇವರು, ಮಂಜುನಾಥಸ್ವಾಮಿ, ಲಕ್ಷ್ಮಿವೆಂಕಟೇಶ್ವರ, ಮೀನಾಕ್ಷಿ ಸುಂದರೇಶ್ವರಸ್ವಾಮಿ, ಗುಹಾಂತರ ರಾಮಲಿಂಗೇಶ್ವರ ಸ್ವಾಮಿ ದೇವಾಲಯಗಳು ಇರುವುದರಿಂದ ದೇವಾಲಯಗಳ ತವರೂರು ಎಂಬ ಖ್ಯಾತಿಗಳಿಸಿದೆ.

ಶ್ರೀ ಕೋದಂಡರಾಮಸ್ವಾಮಿ ದೇವಾಲಯ ಪುರಾಣ ಪ್ರಸಿದ್ಧ ದೇವಾಲಯವಾಗಿದ್ದು, ಪ್ರತಿ ವರ್ಷ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ವತಿಯಿಂದ ಬ್ರಹ್ಮರಥೋತ್ಸವ ಅತ್ಯಂತ ವಿಶೇಷತೆಯಿಂದ ಕೂಡಿದ ಜಾತ್ರಾ ಮಹೋತ್ಸವವಾಗಿದ್ದು ಅತಿ ವಿಜೃಂಭಣೆಯಿಂದ ನೆರವೇರಲಿದೆ. ಈ ಜಾತ್ರಾ ಮಹೋತ್ಸವದ ವಿಶೇಷತೆಯನ್ನು ಕಣ್ತುಂಬಿಕೊಳ್ಳಲು ನಗರದ, ರಾಜ್ಯದ, ಹೊರರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಸಾಗರೋಪಾದಿಯಲ್ಲಿ ಬಂದು ದೇವರ ದರ್ಶನ ಪಡೆಯುವುದರಿಂದ ಬ್ರಹ್ಮರಥೋತ್ಸವ, ಪಲ್ಲಕ್ಕಿ ಉತ್ಸವ, ಕರಗದ ಉತ್ಸವ ಮತ್ತು ಜಾತ್ರಾ ಮಹೋತ್ಸವ  ಹೆಚ್ಚಿನ ಮಹತ್ವವ ಪಡೆದಿದೆ. ಅತ್ಯಂತ ಶ್ರದ್ಧಾ ಭಕ್ತಿಯಿಂದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವರು.

kodadda-rama

ಏ.೨೪ರಂದು ಮಧ್ಯಾಹ್ನ ೨ಗಂಟೆಗೆ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದ್ದು, ರಥೋತ್ಸವಕ್ಕ್ಕೂ ಮುನ್ನ ಬೆಳಗಿನ ಜಾವ ಧರ್ಮದರ್ಶಿ ಮಂಡಳಿಯ ಎಂ.ರಾಮಯ್ಯ, ಟಿ.ಶ್ರೀನಿವಾಸರೆಡ್ಡಿ, ಎಚ್.ಕೆ.ಮುತ್ತಪ್ಪ, ಸಿ.ಲಕ್ಷ್ಮೀನಾರಾಯಣ, ಬಿ.ಶಿವಣ್ಣ, ಎಚ್.ಕೆ.ರಾಮಸ್ವಾಮಿ ರೆಡ್ಡಿ, ರತ್ನಮ್ಮ, ಎ.ಮಾರುತಿಕುಮಾರ್, ಆರ್.ಶ್ರೀನಿವಾಸಮೂರ್ತಿ, ಟಿ.ರಾಮಾರೆಡ್ಡಿ, ಪುಷ್ಪರಾಜು ಪಿಳ್ಳಗಯ್ಯ, ಸುನೀಲ್ ಕೃಷ್ಟಮೂರ್ತಿ, ಎಚ್.ಕೆ.ಲಕ್ಷ್ಮಿನರಸಿಂಹಮೂರ್ತಿ, ಎಚ್.ಪಿ.ಮಂಜುನಾಥ್ ಪಾಪಣ್ಣ, ಎಂ.ಪಾಪಣ್ಣ, ರವಿಕುಮಾರ್ ಅರ್ಚಕರಾದ ಯಲ್ದೂರ್ ಶ್ರೀನಿವಾಸಾಚಾರ್ಯರು ರಘುನಾಥಚಾರ್ಯರು ವಿಶೇಷ ಪೂಜೆ ಪುನಸ್ಕಾರ ಹೋಮ ಹವನಗಳು ನಡೆಸಿಕೊಡುವರು.

೧೬೦೦ ವರ್ಷಗಳ ಹಿಂದೆ ಸಾರಕ್ಕಿ ಪ್ರಾಂತ್ಯದ ರಾಜನು ಹುಳಿಮಾವು ಮತ್ತು ಸುತ್ತಲಿನ ಗ್ರಾಮಗಳನ್ನು ಆಳುತ್ತಿದ್ದನು. ತನ್ನ ಮನೆಯ ದೇವರು ಹುಳಿಮಾವು ಕೋದಂಡರಾಮಸ್ವಾಮಿ ಆಗಿದ್ದರಿಂದ ಪ್ರತಿವರ್ಷ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದನು ಎಂಬುದು ಪುರಾಣದಿಂದ ತಿಳಿದುಬಂದಿದೆ. ಈಗಿನ ಹುಳಿಮಾವು ಗ್ರಾಮಕ್ಕೆ ಈ ಹಿಂದೆ ಅಮ್ಲ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಹುಳಿಮಾವು ಎಂದು ಬದಲಾಗಿರುವುದಾಗಿ ತಿಳಿದುಬಂದಿದೆ. ದೇವಾಲಯವು ಶಿಥಿಲಾವಸ್ಥೆಯಲ್ಲಿದ್ದುದರಿಂದ ದೇವಾಲಯ ಜೀರ್ಣೋದ್ಧಾರ ಸಂದರ್ಭದಲ್ಲಿ ಜಾತ್ರಾ ಮಹೋತ್ಸವವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ೧೬ ವರ್ಷಗಳ ಹಿಂದೆ ದೇವಾಲಯವು ಜೀರ್ಣೊದ್ಧಾರಗೊಂಡಿದ್ದರಿಂದ ಭಕ್ತರ ಭಕ್ತಿ ಇಮ್ಮುಡಿಗೊಂಡು ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಕಳೆ ಬಂದಿದೆ.

ಬ್ರಹ್ಮರಥೋತ್ಸವಕ್ಕೆ ಪ್ರತಿವರ್ಷ ಧರ್ಮದರ್ಶಿ ಸಿ.ಲಕ್ಷ್ಮೀನಾರಾಯಣ್ ಅವರು ವಿಮಾನದಿಂದ ಹೂಮಳೆ ಸುರಿಸುತ್ತಿದ್ದಂತೆ, ಸಾವಿರಾರು ಭಕ್ತಾದಿಗಳು ಗೋವಿಂದಾ . . . ಗೋವಿಂದಾ .  . ಕೋದಂಡರಾಮ ಎಂಬ ಘೋಷಣೆ ಕೂಗಿ ರಥವನ್ನು ಎಳೆದು ಸಂತಸಪಡುತ್ತಾರೆ.

ಬ್ರಹ್ಮರಥೋತ್ಸವ ಸಂದರ್ಭದಲ್ಲಿ ನಂದಿಧ್ವಜ ಕುಣಿತ, ಕೀಲುಕುದುರೆ ಕುಣಿತ, ಡೊಳ್ಳುಕುಣಿತ, ಬಾಣಬಿರುಸು, ಪಟದ ಕುಣಿತ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಮೊಬೈಲ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳಿಗೆ ಅಲ್ಲಲ್ಲಿ ಅರವಂಟಿಕೆಗಳನ್ನು ಹಾಕಿಕೊಂಡು ಭಕ್ತರಿಗೆ ಅನ್ನದಾನ, ಕೋಸಂಬರಿ, ಮಜ್ಜಿಬೆ, ಪಾನಕ ವಿತರಿಸಲಾಗುತ್ತದೆ.

ಸಾವಿರಾರು ವರ್ಷ ಪುರಾತನ ದೇವಾಲಯವನ್ನು ಪುನರ್ ಜೀರ್ಣೋದ್ಧಾರವಾದ ನಂತರ ಬ್ರಹ್ಮರಥೋತ್ಸವ ಅಂಗವಾಗಿ ವಿವಿಧ ದೇವರ ಮೆರವಣಿಗೆ, ಮುತ್ತಿನಪಲ್ಲಕ್ಕಿ ಉತ್ಸವ, ಕರಗ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿತ್ತು ಎನ್ನುತ್ತಾರೆ ಧರ್ಮದರ್ಶಿ ಸಿ.ಲಕ್ಷ್ಮಿನಾರಾಯಣ್.

ಧರ್ಮದರ್ಶಿ ಮಂಡಳಿಯ ಕಾರ್ಯದರ್ಶಿ ಎಚ್.ಕೆ.ಮುತ್ತಪ್ಪ ಮಾತನಾಡಿ ದೇವಾಲಯ ಜೀರ್ಣೊದ್ದಾರ ಸಮಿತಿ ರಚಿಸಿ ಎಲ್ಲಾ ಜನಾಂಗದವರನ್ನು ಧರ್ಮದರ್ಶಿ ಮಂಡಳಿಗೆ ಸೇರಿಸಿಕೊಂಡು ಅಂದಿನಿಂದ ಇಲ್ಲಿಯವರೆಗೆ ಜಾತಿ ಮತ ಭೇದ ಮರೆತು ಎಲ್ಲರೂಗೂಡಿ ಪೂಜೆ ಪುರಸ್ಕಾರ, ಹೋಮ, ಹವನ, ಬ್ರಹ್ಮರಥೋತ್ಸವ ಮತ್ತು ಅರವಂಟಿಕೆಗಳನ್ನು ಜೊತೆಗೂಡಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳುತ್ತಾರೆ.

ರಥೋತ್ಸವದಲ್ಲಿ ಭಾಗವಹಿಸುವ ಸಾವಿರಾರು ಭಕ್ತಾದಿಗಳಿಗೆ ತೊಂದರೆಯಾಗದಂತೆ ಗ್ರಾಮದ ಜನರು ಹಲವಾರು ಕಡೆ ಅರವಂಟಿಕೆಗಳನ್ನು ಹಾಕಿ ಅನ್ನದಾನ, ಕುಡಿಯುವ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡುವುದು ಮತ್ತೊಂದು ವಿಶೇಷ.

Leave a Comment