ಹುಲಿ ಮತ್ತೆ ಪ್ರತ್ಯಕ್ಷ; ಜನರಲ್ಲಿ ಆತಂಕ

ಪುನಃ ಹುಲಿ ಸೆರೆ ಕಾರ್ಯಾಚರಣೆಗೆ ಚಿಂತನೆ
ಹುಣಸೂರು, ಸೆ. 11. ತಾಲೂಕಿನ ಹನಗೂಡು ಹೋಬಳಿಯ ಕೆ.ಜಿ. ಹಬ್ಬನಕುಪ್ಪೆ ಗ್ರಾಮದ ತರಗನ್ ಎಸ್ಟೇಟ್‍ನಲ್ಲಿ ಮರಿಗಳೊಂದಿಗೆ ಬೀಡುಬಿಟ್ಟು, ವಾರದ ಹಿಂದೆ ಕಣ್ಮರೆಯಾಗಿದ್ದ ಹುಲಿ ನಿನ್ನೆ ಮತ್ತೆ ಪತ್ತೆಯಾಗಿದೆ. ಹಸುವೊಂದರ ಮೇಲೆ ದಾಳಿ ಮಾಡುವ ಮೂಲಕ ತನ್ನ ಇರುವಿಕೆಯನ್ನು ಖಚಿತಪಡಿಸಿರುವುದು ಅಧಿಕಾರಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ನಡುಕ ಹುಟ್ಟಿಸಿದೆ.
ತರಗನ್ ಎಸ್ಟೇಟ್ ಸುತ್ತ ಸುಮಾರು ಇಪ್ಪತ್ತು ದಿನಗಳ ಹಿಂದಿನಿಂದಲೂ ಹುಲಿಯ ಓಡಾಟ ಇದ್ದು, ಎರಡು ಮೂರು ಜಾನುವಾರುಗಳ ಮೇಲೆ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆಗೆ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಈ ಮಧ್ಯೆ ಕಾಡುಹಂದಿಯೊಂದನ್ನು ಬಲಿ ಪಡೆದಿದ್ದ ಹುಲಿ, ವಾರದಿಂದೀಚೆಗೆ ಕಣ್ಮರೆಯಾಗಿತ್ತು. ಕಡೆಗೆ, ಹುಲಿ ಮರಳಿ ಕಾಡು ಸೇರಿರಬಹುದೆಂದು ಅಂದಾಜಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ನೀಡಿದ್ದರು.
ಕಾರ್ಯಚರಣೆ ಕೈ ಬಿಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕೊಂಬಿಂಗ್‍ಗೆ ಬಳಸುತ್ತಿದ್ದ ದಸರಾ ಆನೆಗಳನ್ನು ರಾಮನಗರದಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆಗೆ ಕಳುಹಿಸಿಕೊಟ್ಟಿದ್ದರು.
ಪುಂಡಾನೆಯನ್ನ ಯಶಸ್ವಿಯಾಗಿ ಸೆರೆ ಹಿಡಿದ ಹಿನ್ನೆಲೆಯಲ್ಲಿ ಆ ಎಲ್ಲ ದಸರಾ ಆನೆಗಳನ್ನು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಕಳುಹಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಈ ಹಂತದಲ್ಲಿ ಹುಲಿ ಪ್ರತ್ಯಕ್ಷವಾಗಿರುವುದು ಜನರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವು ತಂದಿದೆ.
ಹುಲಿ ಬೀಡುಬಿಟ್ಟಿದ್ದ ತರಗನ್ ಎಸ್ಟೇಟ್ ದಟ್ಟ ಕಾಡಿನಂತಿದ್ದು, ಹಲವು ವರ್ಷಗಳಿಂದ ಜಮೀನನ್ನು ಕೃಷಿಗೆ ಬಳಸಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಕುರುಚಲು ಕಾಡು ದಟ್ಟವಾಗಿ ಬೆಳೆದು ನಿಂತಿದೆ. ಈ ಪ್ರದೇಶದಲ್ಲಿ ಹುಲಿ ಅಡಗಿದ್ದರೂ ಪತ್ತೆ ಕಾರ್ಯ ಅಷ್ಟು ಸುಲಭವಾಗಿಲ್ಲ. ಹೀಗಾಗಿ ಎಸ್ಟೇಟ್ ಜಮೀನನ್ನು ಕೃಷಿ ಯೋಗ್ಯ ಜಮೀನನ್ನಾಗಿ ಪರಿವರ್ತಿಸಲು ನಿರ್ದೇಶಿಸಿ, ಎಸ್ಟೇಟ್ ಮಾಲೀಕರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಹುಲಿ ಪುನಃ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ಜನರು ಭಯಭೀತರಾಗಿದ್ದಾರೆ. ಜೊತೆಗೆ ತಮ್ಮ ಹೊಲಗದ್ದೆಗಳಿಗೆ ತೆರಳಲು ಹಿಂದೇಟು ಹಾಕಿತ್ತಿದ್ದಾರೆ. ದನಕರುಗಳನ್ನು ಮೇಯಲು ಬಿಡಲೂ ಹೆದರುತ್ತಿದ್ದಾರೆ. ಹೀಗಾಗಿ ಮತ್ತೆ ಹುಲಿ ಸೆರೆ ಕಾರ್ಯಾಚರಣೆ ಕೈಗೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

Leave a Comment