ಹುಲಿ ದಾಳಿ; ಹಸು ಬಲಿ ; ಕಾಡಂಚಿನ ಗ್ರಾಮಸ್ಥರಲ್ಲಿ ಮನೆಮಾಡಿದೆ ಭೀತಿ !

ಎಚ್.ಡಿ. ಕೋಟೆ, ಸೆ. 11. ಹಸುವಿನ ಮೇಲೆ ಹುಲಿ ದಾಳಿ ಮಾಡಿದ ಘಟನೆಯಲ್ಲಿ ಹಸು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸಿದ್ದಾಪುರದಲ್ಲಿ ಮಂಗಳವಾರ ನಸುಕಿನಲ್ಲಿ ನಡೆದಿದೆ. ಗ್ರಾಮದ ಸುರೇಶ್ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ.
ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಮೇಟಿಕುಪ್ಪೆ ರೇಂಜ್‍ನ ಸುತ್ತಮುತ್ತ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಭೀತಿ ತಂದಿದೆ. ಈ ಸಂಬಂಧ ಭಯಗ್ರಸ್ಥ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ದೂರುಗಳನ್ನ ನೀಡಿದ್ದರು.
ದಸರಾ ಹಾಗೂ ಸಕಾನೆಗಳ ಸಹಾಯದಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿನಿಂದ ನಾಡಿಗೆ ಬಂದು ಹಾವಳಿ ಮಾಡುತ್ತಿದ್ದ ಹುಲಿಯನ್ನು ಪತ್ತೆಹಚ್ಚಿ, ಮರಳಿ ಕಾಡಿಗಟ್ಟಿದ್ದರು. ಆದರೆ, ಇಂದು ಮುಂಜಾನೆ ಗ್ರಾಮಕ್ಕೆ ಬಂದ ಹುಲಿ ಹಸುವಿನ ಮೇಲೆ ದಾಳಿ ಮಾಡಿ ಸಾಯಿಸಿದೆ.
ಸ್ಥಳಕ್ಕೆ ಮೇಟಿಕುಪ್ಪೆ ವಲಯ ಅರಣ್ಯಾಧಿಕಾರಿ ಶರಣಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾಳಿಕೋರ ಹುಲಿ ಅಕ್ಕಪಕ್ಕದ ಜಮೀನಿನಲ್ಲಿ ಅಡಗಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಕಾಡಂಚಿನ ಗ್ರಾಮಸ್ಥರು ಭಯಭೀತಿಯಲ್ಲಿದ್ದಾರೆ.

Leave a Comment