ಹುಲಿ ಘರ್ಜನೆ- ಹೃದಯಾಘಾತಕ್ಕೆ ೧೨ ಕೋತಿಗಳ ಸಾವು

ಉತ್ತರ ಪ್ರದೇಶ, ಸೆ ೧೩- ಉತ್ತರ ಪ್ರದೇಶದಲ್ಲಿನ ಕೋಟಾವಾಲಿ ಮೋಹಮ್ಮದಿ ಪ್ರದೇಶದಲ್ಲಿನ ಅರಣ್ಯ ಪ್ರದೇಶದಲ್ಲಿ ವಾಸವಿರುವ ಹುಲಿಗಳ ಘರ್ಜನೆ ಕೇಳಿ ೧೨ ಕೋತಿಗಳು ಹೃದಯಾಘಾತದಿಂದ ಮೃತಪಟ್ಟಿವೆ.ಹುಲಿ ನೋಡಿ ಬೆದರಿದ ಕೋತಿಗಳಿಗೆ ಹೃದಯಾಘಾತವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಾಡಿನ ಬಳಿ ಹತ್ತಾರು ಕೋತಿಗಳು ಸತ್ತು ಬಿದ್ದಿರೋದನ್ನು ನೋಡಿ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.ಮಂಗಗಳಿಗೆ ವಿಷ ಕೊಟ್ಟು ಕೊಂದಿರಬಹುದೆಂಬ ಅನುಮಾನ ಮೂಡಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆದರೆ ಅವುಗಳು ಹೃದಯಾಘಾತದಿಂದ ಸಾವನ್ನಪ್ಪಿರೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.ಮೃತಪಟ್ಟ ಕೋತಿಗಳನ್ನು ಪರೀಕ್ಷೆ ನಡೆಸಿದ ಡಾ. ಸಂಜೀವ್ ಕುಮಾರ್ ಅವರು ಆ ಭಾಗದಲ್ಲಿ ಹುಲಿಗಳು ಹೆಚ್ಚಾಗಿದ್ದು, ಹುಲಿಯ ಘರ್ಜನೆ ಕೇಳಿ ಕೋತಿಗಳಿಗೆ ಹೃದಯಾಘಾತ ಸಂಭವಿಸಿದೆ ಎಂದು ಹೇಳಿದ್ದಾರೆ. ಆದರೆ ಪ್ರಾಣಿ ಪ್ರಿಯರು ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ಕೋತಿಗಳು ಕ್ರೂರ ಪ್ರಾಣಿಗಳನ್ನು ನೋಡಿ ಭಯಪಡುವುದಿಲ್ಲ. ಯಾವುದೋ ಸೋಂಕಿನಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾರೆ.ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಕೋತಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಸಂಶೋಧನೆಗಳಿಂದ ಬಹಿರಂಗವಾಗಿತ್ತು. ಆದರೆ ಉತ್ತರ ಪ್ರದೇಶದಲ್ಲಿ ಕೋತಿಗಳ ಸಾವು ಪ್ರಾಣಿಪ್ರಿಯರನ್ನು ಆತಂಕಗೊಳಿಸಿದೆ.

Leave a Comment