‘ಹುಲಿರಾಯ’ನ ಘರ್ಜನೆ

ನಿರ್ದೇಶಕ ಅರವಿಂದ್ ಕೌಶಿಕ್ ನಮ್ ಏರಿಯಾದಲ್ಲಿ ಒಂದ್ ದಿನ (೨೦೦೮) ಮತ್ತು ತುಘಲಕ್ ಎರಡೇ ಚಿತ್ರ ಮಾಡಿದರೂ ವಿಭಿನ್ನವಾಗಿ ಗುರುತಿಸಿಕೊಂಡವರು. ಚಿತ್ರರಂಗಕ್ಕೆ ಬಂದು ೮ ವರ್ಷವಾಗಿದೆ ರಕ್ಷಿತ್ ಶೆಟ್ಟಿ ಅವರೊಬ್ಬರೇ ಅಲ್ಲ ಕೌಶಿಕ್ ಜೊತೆಗೆ ಮತ್ತು ಅವರಿಂದಾಗಿಯೇ ಚಿತ್ರರಂಗಕ್ಕೆ ಬಂದ ಅನೇಕರು ಅವರನ್ನು ದಾಟಿ ಬಹಳ
ಎತ್ತರಕ್ಕೆ ಏರಿದ್ದಾರೆ.

ಅದರೆ ಅವರಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸದ ಕೌಶಿಕ್ “ನಾನು ‘ಹುಲಿರಾಯ’ ಚಿತ್ರದ ಶೂಟಿಂಗ್ ಶುರು ಮಾಡಿದಾಗ ಎರಡು ದಿನವಷ್ಟೇ ನಿಂತ್ಹೋಗುತ್ತೆ ಎಂದು ಆಡಿಕೊಂಡರು. ನಂತರ ಚಿತ್ರ ಡಬ್ಬಿಂಗ್‌ಗೆ ಬಂದಾಗ ಓಹ್ ಡಬ್ಬಿಂಗ್‌ಗೆ ಬಂದ್ಬಿಟ್ರಾ ಅವ್ರಿಗೆಲ್ಲಿ ಚಿತ್ರ ಬಿಡುಗಡೆ ಮಾಡೋಕಾಗುತ್ತೆ ಅಂದ್ರು, ಈಗ ನಾನು ‘ಹುಲಿರಾಯ’ ಚಿತ್ರದ ಚಲಿಸುವ ಭಿತ್ತಿಗಳು (ಮೋಶನ್ ಪೋಸ್ಟರ್) ಬಿಡುಗಡೆ ಮಾಡ್ತಿದ್ದೇನೆ ಇದರೊಂದಿಗೆ ಇನ್ನೊಂದು ಹೊಸ ಸಿನೆಮಾನೂ ಬರುತ್ತೆ ಆಡಿಕೊಳ್ಳೋರು ಹೇಗೆ ತಡ್ಕೊಳ್ತಾರೋ ತಡ್ಕೊಳ್ಳಿ ಅನುಭವಿಸಿರುವ ನೋವನ್ನು ಸಿಟ್ಟಿನಲ್ಲಿ ಹೊರಹಾಕಿದ್ದಾರೆ.

ಕಾಡಿನಲ್ಲಿ ಭಯವೇ ಇಲ್ಲದೆ ಬೆಳೆದ ಹುಡುಗ ಬೆಂಗಳೂರಿಗೆ ಬಂದಾಗ ಏನಾಗುತ್ತೆ? ಎನ್ನುವುದನ್ನು ಕಥೆಯಾಗಿಸಿಕೊಂಡು ಅವರು ‘ಹುಲಿರಾಯ’ಯನನ್ನು ಚಿತ್ರಿಸಿದ್ದಾರೆ. ಅವರ ಸಿಟ್ಟಿಗೆ ಯಾರು ಉತ್ತರ ಕೊಡುತ್ತಾರೊ ಬಿಡುತ್ತಾರೋ ಅಂತು ಕೌಶಿಕ್ ‘ಹುಲಿರಾಯ’ನಿಂದಾಗಿ ಘರ್ಜಿಸುತ್ತಲೇ ಮತ್ತೆ ಸಿನೆಮಾ ಟ್ರ್ಯಾಕ್ ಬಂದಿದ್ದಾರೆ. ಅವರದೇ ಶೈಲಿಯಲ್ಲಿರುವ ಚಿತ್ರದ ಚಲಿಸುವ ಭಿತ್ತಿಯನ್ನು ಬಿಡುಗಡೆ ಮಾಡಿದ ಛಾಯಾಗ್ರಾಹಕ-ನಿರ್ದೇಶಕ ಅಶೋಕ್ ಕಶ್ಯಪ್ “ಕೌಶಿಕ್ ಏನೇ ಮಾಡಿದ್ರೂ ವಿಶೇಷ, ವಿಭಿನ್ನ, ತಿಕ್ಕಲುತನಗಳಿಂದಾಗಿ ಮಾಡುತ್ತಾರೆ ಎಂದು ನಮ್ ಏರಿಯಾದಲ್ಲಿ ಒಂದು ದಿನ ಚಿತ್ರವನ್ನು ಡಿಜಿಟಲ್ ಕಾಮೆರಾದಲ್ಲಿ ಚಿತ್ರಿಸಬೇಕೆಂದು ತಮ್ಮನ್ನು ಮುಂಬೈಗೆ ಕರೆದುಕೊಂಡು ಹೋಗಿ ಡಿಜಟಲ್ ಕಾಮೆರಾ ಬಗ್ಗೆ ತಿಳಿದುಕೊಳ್ಳಲು ಅವಕಾಶಮಾಡಿಕೊಟ್ಟು ಮೊದಲ ಬಾರಿಗೆ ತಾವು ಆ ಕಾಮೆರಾದಲ್ಲಿ ಚಿತ್ರಿಸುವಂತೆ ಮಾಡಿದ್ದನ್ನು ನೆನಪಿಸಿಕೊಂಡರು.  “ಅಂದಿನಿಂದ ನಾನು ಕೌಶಿಕ್‌ನ ಗಮನಿಸುತ್ತಲೇ ಬಂದಿದ್ದೇನೆ ಅವರ ಮುಂದಾಲೋಚನೆ ಮತ್ತು ಸಮಯಪ್ರಜ್ಞೆಯ  ಅಭಿಮಾನಿಯಾಗಿದ್ದೇನೆ. ‘ಹುಲಿರಾಯ’ನ ಚಲಿಸುವ ಭಿತ್ತಿಯನ್ನು ನೋಡಿದರೆ ಇದು ತಿಕ್ಕಲತನದ ಕೆಲಸವೇ ಅನಿಸುತ್ತಿದೆ.

ಕನ್ನಡದಲ್ಲಿರುವ ಅನೇಕ ಹುಲಿಗಳು ಮಧ್ಯೆ ರಾಯನಾಗಿ ಹುಲಿರಾಯ ಬರುತ್ತಿದೆ” ಎಂದು ಕೌಶಿಕ್ ವಿಭಿನ್ನ ಚಿತ್ರ ಕೊಡುತ್ತಿರುವುದನ್ನು ತಿಕ್ಕಲುತನವೆನ್ನುವ ಮೂಲಕ ಪ್ರಶಂಸಿಸಿ ಶುಭ ಹಾರೈಸಿದರು.

ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಬಾಲು ತಾವು ಮತ್ತು ಕೌಶಿಕ್ ಈ ಚಿತ್ರದ ಸ್ಕ್ರಿಪ್ಟ್ ಮಾಡಿ ಟೀಜರ್‌ನ ಸಿದ್ಧಪಡಿಸಿಕೊಂಡು ನಾಗೇಶ್ ಕೋಗಿಲು ಅವರಿಗೆ ತೋರಿಸಿದಾಗ ಅವರು ಚಿತ್ರ ನಿರ್ಮಾಣ ಮಾಡಲು ಒಪ್ಪಿದ್ದಾಗಿ ಹೇಳಿಕೊಂಡರು. ಅನೇಕ ಧಾರಾವಾಹಿಗಳಲ್ಲಿ ನಟಿಸುವಾಗ ಸಾಕಷ್ಟು ಸಿನೆಮಾಗಳಿಗೆ ಕೇಳಲಾಗಿತ್ತಾದರೂ ಕಥೆ ಇಷ್ಟವಾಗದೆ ನಟಿಸಿರಲಿಲ್ಲ ಎಂದ ದಿವ್ಯ, ‘ಹುಲಿರಾಯ’ನಲ್ಲಿರುವ ಪಾತ್ರ ಕೇಳುತ್ತಿದ್ದಂತೆ ಇಷ್ಟವಾಗಿ ನಟಿಸಿದ್ದಾರಂತೆ. ಈ ಚಿತ್ರತಂಡದ ಜೊತೆ ಕೆಲಸ ಮಾಡಿದ್ದು ತುಂಬಾ ಚೆನ್ನಾಗಿತ್ತು. ಕಾಡಿನಲ್ಲಿ ಚಿತ್ರೀಕರಿಸುವಾಗ ತಾನು ಆಟವಾಡಿಕೊಂಡಿದ್ದಾಗಿ ತಮ್ಮ ಹೊಸ
ಸಿನೆಮಾನುಭವಕ್ಕೆ ಮಾತಾದರು.

Leave a Comment