ಹುಲಿಗಳ ಸಂತತಿ ಉಳಿವಿಗಾಗಿ ವ್ಯಂಗ್ಯ ಚಿತ್ರಕಲಾ ಪ್ರದರ್ಶನ

ಕಲಬುರಗಿ,ಆ.13- ಹುಲಿಗಳ ರಕ್ಷಣೆ ಮತ್ತು ಅವುಗಳ ಉಳಿವಿಗಾಗಿ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೇ ಇರುವುದು ವಿಶಾಧನೀಯ ಎಂದು ಐ.ಆರ್.ಎ.ಎ.ಸಿ ಅಧ್ಯಕ್ಷ ಡಾ.ರೆಹಮಾನ ಪಟೇಲ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಚೈತನ್ಯಮಯಿ ಆರ್ಟ ಗ್ಯಾಲರಿಯಲ್ಲಿಂದು ಇಂಡಿಯನ್ ಅಕಾಡೆಮಿ ಆಫ್ ಆರ್ಟ ಆಂಡ್ ಕಲ್ಚರ್ ಆಶ್ರಯದಲ್ಲಿ ಆಯೋಜಿಸಿದ್ದ ವ್ಯಂಗ ಚಿತ್ರಕಲಾವಿದ ಎಂ.ಸಂಜೀವ ಅವರ ವ್ಯಂಗ್ಯ ಚಿತ್ರಕಲಾ ಪ್ರದರ್ಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಜುಲೈ 29ರಂದು ವಿಶ್ವ ಹುಲಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಆದರೇ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ವಿಶಾಧನೀಯ ಎಂದರು.
ಹುಲಿಗಳ ಸಂತತಿಯ ಉಳಿವಿಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಈ ವ್ಯಂಗ್ಯ ಚಿತ್ರಕಲಾ ಪ್ರದರ್ಶನವನ್ನು ಜುಲೈ 29ರಂದೇ ಆಯೋಜಿಸಲು ಸಂಸ್ಥೆ ನಿರ್ಧರಿಸಿತ್ತು ಕಾರಣಾಂತರದಿಂದ ಮುಂದೂಡಿ ಇಂದು ಈ ಪ್ರದರ್ಶನವನ್ನು ಆಯೋಜಿಸಿದೆ ಎಂದರು. ಸರ್ಕಾರ ಕನಿಷ್ಟ ಪಕ್ಷ ಹುಲಿಗಳ ರಕ್ಷಣೆಗಾಗಿ ವಿಶ್ವದಾಧ್ಯಂತ ಆಚರಿಸುವ ವಿಶ್ವಹುಲಿಗಳ ದಿನಾಚರಣೆ ಕಾರ್ಯಕ್ರಮದ ಜಾಹೀರಾತು ನೀಡಿ, ಸರ್ಕಾರದ ವತಿಯಿಂದ ಆಚರಿಸಬೇಕಾಗಿತ್ತು ಎಂದರು.
ವ್ಯಂಗ್ಯ ಚಿತ್ರಕಲಾವಿದ ಎಂ.ಸಂಜೀವ ಅವರು ಮಾತನಾಡಿ, ರಾಷ್ಟ್ರದಲ್ಲಿ ಕೇವಲ 3500-4000 ಹುಲಿಗಳು ಮಾತ್ರ ಇದ್ದು, ಇವುಗಳ ಸಂಖ್ಯೆ ಕ್ಷಣಿಸುತ್ತಿದೆ. ಇವುಗಳ ರಕ್ಷಣೆಗಾಗಿ ಕಾಡುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯ ಸಮಾಜಕ್ಕಿದ್ದು, ಈ ಬಗ್ಗೆ ಸರ್ಕಾರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳನ್ನಾದರು ಆಯೋಜಿಸಬೇಕಾಗಿತ್ತು ಎಂದರು.
ಸರ್ಕಸ್ ಗಳಲ್ಲಿ ಹುಲಿ ಮತ್ತು ಪ್ರಾಣಿಗಳ ಬಳಕೆಯನ್ನು ಸರ್ಕಾರ ನಿಷೇಧ ಹೇರಿದ ಬಳಿಕ ಹಲವು ಸರ್ಕಸ್ ಕಂಪನಿಗಳು ಬೀಗ ಹಾಕಿಕೊಂಡಿವೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು, ಮಕ್ಕಳು ಹುಲಿ ಇತರ ಪ್ರಾಣಿಗಳನ್ನು ನೋಡಲೆಂದೇ ಸರ್ಕರಸ್ ಗಳಿಗೆ ಹೋಗುತ್ತಿದ್ದರು. ಇಂದು ಸರ್ಕಸ್ ಕೇವಲ ಮನುಷ್ಯನ ಕಸರತ್ತು ಹಾಗೂ ಕೃತಕ ವಸ್ತುಗಳಿಂದ ಜನರನ್ನು ರಂಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮಕ್ಕೆ ಹಿರಿಯ ವೈದ್ಯಧಿಕಾರಿ ಡಾ.ಎಂ.ಡಿ ಮಿಣಜಗಿ, ಹಿರಿಯ ಚಿತ್ರಕಲಾವಿದ ಶೇಖ ಏಜಾಜುದ್ದೀನ್, ಆರ್ಟ ಗ್ಯಾಲರಿ ನಿರ್ದೇಶಕ ಡಾ.ಎ.ಎಸ್.ಪಾಟೀಲ್ ಸೇರಿದಂತೆ ಹಲವರು ಇದ್ದರು. ಬಸವರಾಜ ಸ್ವಾಗತಿಸಿದರು.

Leave a Comment