ಹುಬ್ಬಳ್ಳಿ ಶೂಟೌಟ್ ಗೆ ಬಿಹಾರ ಚುನಾವಣೆಯ ದ್ವೇಷವೇ ಕಾರಣ

ಹುಬ್ಬಳ್ಳಿ, ಸೆಪ್ಟೆಂಬರ್ 23: ಶನಿವಾರವಷ್ಟೆ ಹುಬ್ಬಳ್ಳಿಯಲ್ಲಿ ನಡೆದ ಶೂಟೌಟ್ ಪ್ರಕರಣ, ವಿಕೆಂಡ್ ಮೂಡಿಗೆ ಜಾರುತ್ತಿದ್ದ ಹುಬ್ಬಳ್ಳಿ ಮಂದಿಯ ನೆಮ್ಮದಿಗೆ ಭಂಗ ತಂದಿತ್ತು. ಇದೀಗ ಈ ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ, ಬಿಹಾರದಲ್ಲಿ ನಡೆದ ಚುನಾವಣೆಯ ದ್ವೇಷವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಬಿಹಾರದ ಬೈಸಾಯಿ ಜಿಲ್ಲೆ ಹಸನಪುರ ಗ್ರಾಮದ ಸರ್ವೇಶಕುಮಾರ್ ಸಿಂಗ್ ಪ್ರಸಾದ್ ಅವರ ಮೇಲೆ ಶನಿವಾರ ಹುಬ್ಬಳ್ಳಿಯ ಮಂಜುನಾಥ್ ನಗರದಲ್ಲಿ ಎರಡು ನಾಡ ಪಿಸ್ತೂಲ್ ನಿಂದ ಮೂರು ಸುತ್ತಿನ ಗುಂಡಿನ ದಾಳಿ ನಡೆಸಲಾಗಿತ್ತು. ಇದರಿಂದ ಎಡ ಕಿವಿ ಹಾಗೂ ಹೃದಯ ಭಾಗಕ್ಕೆ ಗುಂಡುಗಳು ತಗುಲಿದ್ದವು. ಶೂಟೌಟ್ ಗೆ 303 ರೈಫಲ್ ಗೆ ಬಳಸುವ ಗುಂಡುಗಳನ್ನೇ ನಾಡ ಪಿಸ್ತೂಲ್ ಗೆ ಬಳಕೆ ಮಾಡಿರುವುದು ಸ್ಥಳದಲ್ಲಿ ದೊರೆತ 7.7 ಎಂ.ಎಂ. ಸಜೀವ ಗುಂಡಿನಿಂದ ತಿಳಿದು ಬಂದಿದೆ.

ಪ್ರಕರಣದ ತನಖೆ ಕಾರಣದಿಂದ ರವಿವಾರ ವಿಧಿ, ವಿಜ್ಞಾನ ಪ್ರಯೋಗಾಲಯ ಹಾಗೂ ಬ್ಯಾಲೆಸ್ಟಿಕ್ ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಹತ್ಯೆ ಸಮಯದಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನ ಹಾದು ಹೋಗಿರುವುದು ಸಿಸಿ ಟಿವಿಯ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ತನಿಖೆಗಾಗಿ ಈಗಾಗಲೇ ಆರು ವಿಶೇಷ ತಂಡಗಳನ್ನು ರಚಿಸಿದ್ದು, ಒಂದು ತಂಡವನ್ನು ಹೆಚ್ಚಿನ ತನಿಖೆಗೆ ಬಿಹಾರಕ್ಕೂ ಕಳಿಸುವ ಸಾಧ್ಯತೆ ಇದೆ.

ಮೃತನ ಸಹೋದರ ಮುಖೇಶ್ ಸಿಂಗ್ ಹಸನ್ ಪುರ ಗ್ರಾಮದ ಸರಪಂಚ್ ಆಗಿದ್ದಾರೆ. ಈ ಹಿಂದೆ ಸರಪಂಚ್ ಚುನಾವಣೆ ವೇಳೆ ಎರಡು ಗುಂಪುಗಳ ಮದ್ಯೆ ಗ್ಯಾಂಗ್ ವಾರ್ ಕೂಡ ನಡೆದಿತ್ತು. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆಯಲ್ಲಿ ಸರ್ವೇಶ್ ಕೆಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಜೊತೆಗೆ ಪ್ರಕರಣದ ಪ್ರಮುಖ ಸಾಕ್ಷಿ ಕೂಡ ಸರ್ವೇಶ್ ಅವರೇ ಆಗಿದ್ದರು. ಈ ಕಾರಣದಿಂದ ಸರ್ವೇಶ್ ಮೇಲೆ ಎರಡು ಬಾರಿ ಕೊಲೆ ಸಂಚು ಕೂಡ ನಡೆದಿತ್ತು ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ.

ಆದರೆ ಮೂರನೇ ಸಂಚು ಮಾತ್ರ ಸರ್ವೇಶನ ಪ್ರಾಣಕ್ಕೆ ಸಂಚಕಾರ ತಂದಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೇಶ್ ಕುಮಾರ್ ಸಿಂಗ್ ನ ಸಹೋದ್ಯೋಗಿಗಳನ್ನು ಕೂಡ ವಿಚಾರಣೆಗೊಳಪಡಿಸಲಾಗಿದೆ. ಸಿನಿಮೀಯ ರೀತಿಯ ಈ ಕೊಲೆಗೆ ಕಾರಣ ಏನು ಎಂಬುದು ಮಾತ್ರ ತನಿಖೆ ಪೂರ್ಣಗೊಂಡ ಮೇಲೆ ಗೊತ್ತಾಗಲಿದೆ.

Leave a Comment