ಹುಬ್ಬಳ್ಳಿ ಟೈಗರ್ಸ್ ದಾಳಿಗೆ ನಲುಗಿದ ಮೈಸೂರು ವಾರಿಯರ್ಸ್

ಮೊಹಮ್ಮದ್ ತಾಹಾ, ವಿನಯ್‍ಕುಮಾರ್ ಅಮೋಘ ಪ್ರದರ್ಶನ

ವಾರಿಯರ್ಸ್‍ನ ಶೋಯೆಬ್ ಮೇನೇಜರ್ ಮಿಂಚು

ಮೈಸೂರು: ಕಿಕ್ಕಿರಿದು ತುಂಬಿದ ಕ್ರೀಡಾಂಗಣದಲ್ಲಿ ಅಂತಿಮ ಕ್ಷಣದವರೆಗೂ ಫಲಿತಾಂಶಕ್ಕಾಗಿ ಕ್ರೀಡಾಭಿಮಾನಿಗಳನ್ನು ತುದಿಗಾಲಲ್ಲಿರಿಸಿದ ಪಂದ್ಯದಲ್ಲಿ ತಮ್ಮ ಎಲ್ಲಾ ಕೌಶಲ್ಯಗಳನ್ನು ಪಣಕ್ಕಿಟ್ಟವರಂತೆ ಆಡಿದ ವಿನಯ್‍ಕುಮಾರ್ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು ಸ್ಥಳೀಯ ಫೇವರಿಟ್ ಮೈಸೂರು ವಾರಿಯರ್ಸ್ ತಂಡವನ್ನು 3 ರನ್‍ಗಳಿಂದ ಮಣಿಸಿ ಜಯದ ನಗೆ ಬೀರಿತು.

ಇಲ್ಲಿನ ಗಂಗೋತ್ರಿ ಎಸ್‍ಡಿಎನ್‍ಆರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕೆಪಿಎಲ್ ಟ್ವೆಂಟಿ 20 ಕ್ರಿಕೆಟ್‍ನ 11ನೇ ಪಂದ್ಯದಲ್ಲಿ ಭಾನುವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಹುಬ್ಬಳ್ಳಿ ಟೈಗರ್ಸ್ ತಂಡವು ಆರಂಭಿಕ ಬ್ಯಾಟ್ಸ್‍ಮನ್ ಮೊಹಮ್ಮದ್ ತಾಹ (68, 47b, 14×4) ಹಾಗೂ ಡೆತ್ ಓವರ್‍ಗಳಲ್ಲಿ ಕಣಕ್ಕಿಳಿದ ನಾಯಕ ವಿನಯ್‍ಕುಮಾರ್ (30 not out, 17b, 3×4, 1×6) ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್‍ಗಳ ಉತ್ತಮ ಮೊತ್ತವನ್ನು ಕಲೆ ಹಾಕಿತು.

ಇದಕ್ಕೆ ಪ್ರತ್ಯುತ್ತರವಾಗಿ ಒಂದು ಓವರ್‍ಗೆ ಸರಾಸರಿ 9.15 ರನ್‍ಗಳ ಅವಶ್ಯಕತೆ ಹೊಂದಿದ ಮೈಸೂರು ವಾರಿಯರ್ಸ್ ತಂಡವು ಆರಂಭಿಕ ಬ್ಯಾಟ್ಸ್‍ಮನ್ ಅರ್ಜುನ್ ಹೊಯ್ಸಳ (31, 18b, 2×4, 3×6) ಅವರ ಅಮೋಘ ಪ್ರದರ್ಶನದ ನೆರವಿನಿಂದ ಪವರ್‍ಪ್ಲೇನ ಮೊದಲ 6 ಓವರ್‍ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 63 ರನ್ ಪೇರಿಸಿ ಸುಸ್ಥಿತಿಯಲ್ಲಿ ಇದ್ದರೂ, ಹುಬ್ಬಳ್ಳಿ ನಾಯಕ ವಿನಯ್ ಸ್ಪಿನ್ನರ್ಸ್‍ಗಳನ್ನು ದಾಳಿಗೆ ಇಳಿಸುತ್ತಿದ್ದಂತೆ ಮೈಸೂರು ವಾರಿಯರ್ಸ್ ತಂಡದ ಬ್ಯಾಟ್ಸ್‍ಮನ್‍ಗಳು ಕಕ್ಕಾಬಿಕ್ಕಿಯಾಗಿ ವಿಕೆಟ್‍ಗಳನ್ನು ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ಈ ಮಧ್ಯೆ ಶೋಯೆಬ್ ಮೇನೇಜರ್ (58, 31b, 4×4, 4×6). ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿ ತಮ್ಮ ತಂಡ ಗುರಿಯನ್ನು ಸಮೀಪಿಸುವ ಆಸೆ ಹುಟ್ಟಿಸಿದರು.

ಆದರೆ ಪಂದ್ಯದ 19ನೇ ಓವರ್‍ನಲ್ಲಿ ಎಂ.ಬಿ.ದರ್ಶನ್ ಅವರ ಬೌಲಿಂಗ್‍ನಲ್ಲಿ ಸತತ ಎರಡು ಸಿಕ್ಸರ್‍ಗಳನ್ನು ಸಿಡಿಸಿದ ಶೋಯೆಬ್ ಅದೇ ಶಾಟ್‍ನ ಮರುಪ್ರಯೋಗಕ್ಕೆ ಇಳಿದು ಅಂತಿಮವಾಗಿ ಪಾಯಿಂಟ್ ಬೌಂಡರಿ ಫಿಲ್ಡರ್‍ಗೆ ಕ್ಯಾಚಿತ್ತು ಪೆವಿಲಿಯನ್‍ಗೆ ಮರಳಿದರು.

ಆ ನಂತರ ಅಂತಿಮ 20ನೇ ಓವರ್‍ನಲ್ಲಿ 6 ಎಸೆತಗಳಲ್ಲಿ 13 ರನ್ ಮಾಡಬೇಕಿದ್ದ ಮೈಸೂರು ವಾರಿಯರ್ಸ್ ಬ್ಯಾಟ್ಸ್‍ಮನ್‍ಗಳು ಕ್ರಾಂತಿಕುಮಾರ್ ಅವರ ಬೌಲಿಂಗ್‍ನಿಂದ ಕೇವಲ 9ರನ್‍ಗಳಷ್ಟೇ ಪಡೆಯಲು ಶಕ್ಯರಾಗಿ ಸೋಲಿಗೆ ಶರಣಾದರು.

ಸಂಕ್ಷಿಪ್ತ ಸ್ಕೋರ್:

ಹುಬ್ಬಳ್ಳಿ ಟೈಗರ್ಸ್ 20 ಓವರ್‍ಗಳಲ್ಲಿ 6 ವಿಕೆಟ್‍ಗೆ 182 (ಮೊಹಮ್ಮದ್ ತಾಹ 68, ವಿನಯ್‍ಕುಮಾರ್ 30. ವೈಶಾಖ್ ವಿಜಯ್‍ಕುಮಾರ್ 45ಕ್ಕೆ 3) ಮೈಸೂರು ವಾರಿಯರ್ಸ್ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 (ಶೋಯೆಬ್ ಮ್ಯಾನೇಜರ್ 58, ಅರ್ಜುನ್ ಹೊಯ್ಸಳ 31. ಸೂರಜ್ ಶೇಷಾದ್ರಿ 24ಕ್ಕೆ 3) ಹುಬ್ಬಳ್ಳಿ ಟೈಗರ್ಸ್‍ಗೆ 3 ರನ್‍ಗಳ ಜಯ.

Leave a Comment