ಹುತ್ರಿದುರ್ಗ ಹೋಬಳಿ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ರೈತರ ಪಾದಯಾತ್ರೆ

ಕುಣಿಗಲ್, ಜ. ೧೨- ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯನ್ನು ಸಮಗ್ರ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಆನಂದ್‍ಪಟೇಲ್ ಮತ್ತು ತಾಲ್ಲೂಕು ಅಧ್ಯಕ್ಷ ಅನಿಲ್‍ಕುಮಾರ್ ನೇತೃತ್ವದಲ್ಲಿ ಯಲಗಲವಾಡಿಯಿಂದ ಕುಣಿಗಲ್‌ವರೆಗೆ ನೂರಾರು ರೈತ ಮಹಿಳೆಯರು ಸೇರಿದಂತೆ ರೈತರು ಬೃಹತ್ ಪಾದಯಾತ್ರೆ ನಡೆಸಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಹಿತ್ತಲಹಳ್ಳಿ ಮಠಾಧ್ಯಕ್ಷರಾದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅವರು ರೈತರ ಪಾದಯಾತ್ರೆಗೆ ಚಾಲನೆ ನೀಡುವ ಮೂಲಕ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು.

ತಹಶೀಲ್ದಾರ್ ಕಛೇರಿಯ ಮುಂಭಾಗ ಜಮಾಯಿಸಿದ ಪಾದಯಾತ್ರೆಯಲ್ಲಿ ಬಂದ ನೂರಾರು ರೈತರು ಜನಪರ ಕೆಲಸ ಮಾಡದೇ ಅಭಿವೃದ್ಧಿ ಕಾರ್ಯವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮರೆತಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಆನಂದ್‍ಪಟೇಲ್, ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಹೆಬ್ಬೂರು ಹೇಮಾವತಿ ಇಂಜಿನಿಯರ್, ಪಿಡಬ್ಲ್ಯೂಡಿ ಎ.ಇ.ಇ. ಅವರಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಂದು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವಂತೆ ಒತ್ತಾಯಿಸಿದರು.

ತಾಲ್ಲೂಕಿಗೆ ನೀರು ಹರಿಸಲು ಹೋರಾಡಿದವರನ್ನು ಮರೆತು ತಮ್ಮ ಕ್ಷೇತ್ರಕ್ಕೆ ನೀರು ಕೊಂಡು ಹೋಗಲು ಸಂಚು ರೂಪಿಸಿದ್ದಾರೆ. ಹುತ್ರಿದುರ್ಗದ 17 ಕೆರೆಗೆ ನೀರು ಬಿಡುತ್ತೇವೆ ಎನ್ನುವ ಅಧಿಕಾರಿಗಳು ಇದೀಗ ಕುಣಿಗಲ್ ಕ್ಷೇತ್ರದಲ್ಲಿ ಹಾಲಿ ಇರುವ ಕೆರೆಗಳಿಗೆ ಹೇಮಾವತಿ ನೀರು ಏತಕ್ಕಾಗಿ ಬಿಡಲಿಲ್ಲ ಎಂದು ಪ್ರಶ್ನಿಸಿದರು.

ತಾಲ್ಲೂಕು ಅಧ್ಯಕ್ಷ ಅನಿಲ್‍ಕುಮಾರ್ ಮಾತನಾಡಿ, ವೈ.ಕೆ.ರಾಮಯ್ಯನವರ ನಂತರ ತಾಲ್ಲೂಕು ಹುತ್ರಿದುರ್ಗ ಅಭಿವೃದ್ಧಿಯಲ್ಲಿ ತುಂಬಾ ಹಿಂದೆ ಉಳಿದಿದೆ. ಸಮರ್ಪಕ ರಸ್ತೆಗಳಿಲ್ಲ, ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಈ ಭಾಗದ ಪ.ಜಾತಿ, ಪ.ಪಂಗಡದವರು ನೆಲೆಸಿರುವ ಕಾಲೋನಿಗಳ ಅಭಿವೃದ್ಧಿಯನ್ನೇ ಕಡೆಗಣಿಸಲಾಗಿದೆ. ಈ ಭಾಗದಲ್ಲಿ ಅಂತರ್ಜಲ ಸೇರಿದಂತೆ ಯಾವುದೇ ನದಿಗಳು ಇಲ್ಲದಿರುವುದರಿಂದ ಬಹುತೇಕ ಬರಡು ಭೂಮಿಯಾಗಿದ್ದು, ಇಲ್ಲಿ ಸಮರ್ಪಕ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿದರು.

ನಂತರ ತಹಶೀಲ್ದಾರ್ ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ವೆಂಕಟೇಶ್, ಹುತ್ರಿದುರ್ಗ ಹೋಬಳಿ ಅಧ್ಯಕ್ಷ ಗಾಣಿಮಾಸ್ತಿಪಾಳ್ಯದ ಕುಮಾರ್, ಹೋಬಳಿ ಕಾರ್ಯದರ್ಶಿ ಅಂಚೆಪಾಳ್ಯ ಲೋಕೇಶ್, ಚಿಕ್ಕಮಾವತ್ತೂರು ರಮೇಶ್, ರಾಮಯ್ಯ, ಜಿ.ಎನ್. ಚಕ್ರವರ್ತಿ, ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.

Leave a Comment