ಹುತಾತ್ಮ ಅರಣ್ಯ ರಕ್ಷಕರಿಗೆ ಪರಿಹಾರ ಹಣ 30 ಲಕ್ಷ ರೂ.ಗೆ ಏರಿಕೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಸೆ. ೧೧- ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ನೀಡುವ ಪರಿಹಾರವನ್ನು 20 ಲಕ್ಷದಿಂದ 30 ಲಕ್ಷ ರೂ.ವರೆಗೆ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದರು.
ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟ ಪೊಲೀಸ್ ಸಿಬ್ಬಂದಿಗೆ ನೀಡುತ್ತಿದ್ದ ಪರಿಹಾರವನ್ನು 20 ಲಕ್ಷದಿಂದ 30 ಲಕ್ಷ ರೂ.ಗೆ ಏರಿಸಲಾಗಿದ್ದು, ಇದನ್ನು ಹುತಾತ್ಮ ಅರಣ್ಯ ಸಿಬ್ಬಂದಿಗಳಿಗೂ ನೀಡಲು ನಿರ್ಧರಿಸಲಾಗಿದ್ದು, ಇನ್ನು ಮುಂದೆ ಹುತಾತ್ಮ ಅರಣ್ಯ ಸಿಬ್ಬಂದಿಗೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.
ನಗರದ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದಲ್ಲಿ ಇಂದು ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ ಹುತಾತ್ಮರು ಸದಾ ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ನಂತರ ಅವರ ಕುಟುಂಬದವರಿಗೆ ನೆರವಾಗಲು ಪರಿಹಾರದ ಮೊತ್ತವನ್ನು 30 ಲಕ್ಷ ರೂ.ಗೆ ಏರಿಕೆ ಮಾಡಿರುವುದಾಗಿ ಹೇಳಿದರು.
ಮಾನವ – ವನ್ಯಮೃಗಗಳ ಸಂಘರ್ಷ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆನೆಗಳ ದಾಳಿಯಿಂದ ಅನೇಕ ಸಮಸ್ಯೆಗಳಾಗಿವೆ. ಇದನ್ನು ತಡೆಯಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಅವರು ಹೇಳಿದರು.
ಕಾಡು ಉಳಿಸುವ ಮೂಲಕ ಪರಿಸರದ ಸಮತೋಲನ ಕಾಯ್ದುಕೊಳ್ಳಬೇಕಿದೆ. ನಮ್ಮ ರಾಜ್ಯ ಸಂಪದ್ಭರಿತ ಅರಣ್ಯ ಪ್ರದೇಶವನ್ನು ಹೊಂದಿದೆ. ವನ್ಯಜೀವಿಗಳ ಸಂಖ್ಯೆಯೂ ಹೆಚ್ಚಿದೆ ಎಂದರು.
ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳಿಗಾಗಿ ಪ್ರಾಣತ್ಯಾಗ ಮಾಡಿದ ಅರಣ್ಯ ಸಿಬ್ಬಂದಿ ಮತ್ತು ಅರಣ್ಯಾಧಿಕಾರಿಗಳ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.
ಪ್ರತಿಕ್ರಿಯೆ ಇಲ್ಲ
ಶಾಸಕ ಡಿ.ಕೆ. ಶಿವಕುಮಾರ್ ಅವರ ಇಡಿ ಬಂಧನ ಖಂಡಿಸಿ ನಗರದಲ್ಲಿಂದು ನಡೆದಿರುವ ಪ್ರತಿಭಟನೆ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರಾಕರಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್ ಸೇರಿದಂತೆ ಅರಣ್ಯ ಇಲಾಖೆಯ ಹಲವು ಹಿರಿಯ-ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment