ಹುಣಸೂರು ಕ್ಷೇತ್ರದಲ್ಲಿ  2,26,920 ಮತದಾರರು: ಜಿಲ್ಲಾಧಿಕಾರಿ ಅಭಿರಾಮ್ ಶಂಕರ್

ಮೈಸೂರು, ನ.11- ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದಿನಿಂದ ನೀತಿ ಸಂಹಿತೆ ಜಾರಿಯಾಗಿದ್ದು, ನಾಮಪತ್ರ ಸ್ವೀಕಾರ ಆರಂಭವಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ ನಾಮಪತ್ರ ಸ್ವೀಕಾರ ಆರಂಭವಾಗಿದ್ದು  ಉಮೇದುವಾರಿಕೆ ಸಲ್ಲಿಸಲು ನ.18 ಕೊನೆ ದಿನವಾಗಿದೆ. ನ.19 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು ನ.21 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ನೀತಿ‌ಸಂಹಿತೆ ಜಾರಿಯಾಗಲಿದ್ದು, ಇಡಿ ಜಿಲ್ಲೆಗೆ ನೀತಿಸಂಹಿತೆ ಅನ್ವಯ ಆಗುವುದಿಲ್ಲ ಎಂದು ತಿಳಿಸಿದರು.

ಹುಣಸೂರಿನಲ್ಲಿ ಒಟ್ಟು ಮತದಾರರು 2,26,920 ಮತದಾರರಿದ್ದು ಈ ಪೈಕಿ  ಪುರುಷ ಮತದಾರರು 1,14,150, ಮಹಿಳೆ ಮತದಾರರು 1,12,770 ಇದ್ದಾರೆ. ಒಟ್ಟು 274 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಚುನಾವಣಾ ಕಾರ್ಯಕ್ಕೆ ಒಬ್ಬರು ಆರ್ ಒ, ಒಬ್ಬರು ಎಆರ್ ಒ, 21 ಸೆಕ್ಟರ್ ಆಫಿಸರ್ ಹಾಗೂ 274 ಬಿಎಲ್ ಒಗಳನ್ನ ನಿಯೋಜಿಸಲಾಗಿದೆ ಎಂದು ಅಭಿರಾಮ್ ಜಿ ಶಂಕರ್ ತಿಳಿಸಿದರು.

ಹುಣಸೂರು ಕ್ಷೇತ್ರದಲ್ಲಿ ಇದೆ ಮೊದಲ ಬಾರಿಗೆ m3 ವಿದ್ಯುನ್ಮಾನ ಮತ ಯಂತ್ರ ಬಳಕೆ ‌ಮಾಡಲಾಗುತ್ತದೆ. ಮತ ಯಂತ್ರಗಳ ಪ್ರಥಮ ಹಂತದ ಪರಿಶೀಲನಾ ಕಾರ್ಯ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಪರಿಶೀಲನೆ ಮಾಡಲಾಗಿದೆ. ಮಳೆಯಿಂದ ಹಾನಿಯಾದ ಅಂಗನವಾಡಿ ಕೇಂದ್ರಗಳು, ಶಾಲೆಗಳಲ್ಲಿ ಸೌಲಭ್ಯ ಒದಗಿಸಲು ಕ್ರಮವಹಿಸಲಾಗಿದೆ. ಮತದಾರರಿಗೆ ಗೊಂದಲವಾಗದ ರೀತಿಯಲ್ಲಿ ಕ್ರಮವಹಿಸಲಾಗುವುದು ಎಂದರು.

50 ಸಾವಿರ ಮೇಲ್ಪಟ್ಟ ಹಣ ಸಾಗಿಸಲು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ದಾಸ್ತಾನು ಸರಬರಾಜು ಮಾಡುವವರು ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಇದರ ಬಗ್ಗೆ ನಿಗಾ ಇಡಲು ನಿಗಾ ತಂಡಗಳ ರಚನೆ ಮಾಡಲಾಗಿದೆ. ಸರ್ಕಾರಿ ಕಟ್ಟಡಗಳು, ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಗಳು, ಗೋಡೆಬರಹಗಳ ತೆರವಿಗೆ ಕ್ರಮ ವಹಿಸಲಾಗುವುದು. ಸರ್ಕಾರಿ ವೆಬ್ ಸೈಟ್ ಗಳಲ್ಲಿ ಸಚಿವರ, ಪಕ್ಷದ ಚಿಹ್ನೆಗಳನ್ನು ತೆರವುಗೊಳಿಸಲಾಗುತ್ತದೆ. ಮನುಗನಹಳ್ಳಿ , ವೀರನಹೊಸಹಳ್ಳಿ, ಮುತ್ತುರಾಯನ ಹೊಸಹಳ್ಳಿ, ಗೌಡಗೆರೆ , ಡೊಡ್ಡೆಕೊಪ್ಪಲು ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುವುದು ಎಂದು ಅಭಿರಾಂ ಶಂಕರ್ ವಿವರಿಸಿದರು.

ಹುಣಸೂರು ಶಾಸಕರಾಗಿದ್ದ ಎಚ್. ವಿಶ್ವನಾಥ್ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ವಿಪ್ ಉಲ್ಲಂಘಿಸಿದ ಆರೋಪದಲ್ಲಿ ಅನರ್ಹಗೊಳಿಸಿದ್ದರಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ.

Leave a Comment