ಹುಣಸೂರು ಉಪ ಚುನಾವಣೆ: ಕಾಂಗ್ರೆಸ್ ಬೆನ್ನಿಗೆ ಜಿ.ಟಿ.ದೇವೇಗೌಡ

ಬೆಂಗಳೂರು, ಡಿ 3 – ಉಪಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ  ಪ್ರತಿಷ್ಠಿತ ಜಿದ್ದಾ ಜಿದ್ದಿ ಕಣ ಎಂದೇ ಗುರುತಿಸಿಕೊಂಡಿರುವ ಮೈಸೂರಿನ ಹುಣಸೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್  ಅವರಿಗೆ ಜೆಡಿಎಸ್ ಹಿರಿಯ ನಾಯಕ ಜಿ.ಟಿ.ದೇವೇಗೌಡ ಸಾಥ್ ನೀಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿರುವ ಈ ಉಪ ಚುನಾವಣೆಯಲ್ಲಿ ಮೈಸೂರು ಹೊಸ ಅಧ್ಯಾಯ ಬರೆಯುವ ತವಕದಲ್ಲಿದೆ.

ಜಿ.ಟಿ. ದೇವೇಗೌಡ ಅವರ ಆಪ್ತ ಮೂಲಗಳು ಈ ವಿಷಯ ತಿಳಿಸಿದ್ದು, ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಅವರಿಗೆ ತಕ್ಕ ಪಾಠ ಕಲಿಸುವ ಹಾಗೂ ತಮ್ಮನ್ನು ನಿರ್ಲಕ್ಷಿಸಿರುವ ತಮ್ಮ ಪಕ್ಷ ಜೆಡಿಎಸ್ ಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಕೊನೆ ಕ್ಷಣದಲ್ಲಿ ಜಿ.ಟಿ.ದೇವೇಗೌಡ ಯೂ ಟರ್ನ್ ಹೊಡೆದಿದ್ದಾರೆ.

ಹುಣಸೂರು ಕ್ಷೇತ್ರದಲ್ಲಿ ತಮ್ಮ ಪುತ್ರನ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ ಎಂಬ ಕಾರಣಕ್ಕಾಗಿ ಜಿಟಿಡಿ ಕಾಂಗ್ರೆಸ್ ಬೆನ್ನಿಗೆ ನಿಂತಿದ್ದು ಒಕ್ಕಲಿಗ ಸಮುದಾಯದ ಗಣನೀಯ ಪ್ರಮಾಣದ ಮತಗಳು ಕಾಂಗ್ರೆಸ್ ಗೆ ಪಲ್ಲಟವಾಗುವಂತೆ ನೋಡಿಕೊಳ್ಳುವುದಾಗಿ ಕೈ ಪಾಳೆಯದ ನಾಯಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯಿಂದ ಸ್ಪರ್ಧಿಸಿರುವ ಹಿರಿಯ ನಾಯಕ ವಿಶ್ವನಾಥ್ ಗೆದ್ದರೆ ಹುಣಸೂರು ಕ್ಷೇತ್ರದ ರಾಜಕಾರಣ ಸಂಪೂರ್ಣವಾಗಿ ತಮ್ಮ ಕೈ ಬಿಡುತ್ತದೆ ಎಂಬುದು ಜಿ.ಟಿ. ದೇವೇಗೌಡ ಅವರ ಲೆಕ್ಕಾಚಾರವಾಗಿದೆ.

ಏಕಕಾಲಕ್ಕೆ ಹುಣಸೂರು ವಿದಾನಸಭಾ ಕ್ಷೇತ್ರ ಜೆಡಿಎಸ್ ಪಾಲಿನ ಭದ್ರಕೋಟೆಯಾಗಿ ಉಳಿಯಬಾರದು.ಹಾಗೆಯೇ ಬಿಜೆಪಿ ವಶಕ್ಕೂ ಹೋಗಬಾರದು ಎಂಬುದು ಅವರ ಯೋಚನೆ. ಜೆಡಿಎಸ್ ನಲ್ಲಿದ್ದಾ ಸಾ.ರಾ.ಮಹೇಶ್ ಅವರಿಗೆ ಪ್ರಾಧಾನ್ಯ ನೀಡಿ ತಮ್ಮನ್ನು ಜಿಲ್ಲೆಯ ರಾಜಕಾರಣದಲ್ಲಿ ಮೂಲೆಗುಂಪು ಮಾಡಲಾಯಿತು. ಅದೇ ಕಾಲಕ್ಕೆ ಬಿಜೆಪಿ ಕೂಡಾ ತಮ್ಮ ಮಗನಿಗೆ ಟಿಕೆಟ್ ಕೇಳಿದರೆ ಕೊಡಲಿಲ್ಲ.

ಹೀಗಾಗಿ ಒಂದೇ ಬಾಣಕ್ಕೆ ಬಿಜೆಪಿ ವತಿಯಿಂದ ಸ್ಪರ್ಧಿಸಿರುವ ವಿಶ್ವನಾಥ್ ಹಾಗೂ ಜೆಡಿಎಸ್ ಕ್ಯಾಂಡಿಡೇಟಿನ ಪರಾಭವದಲ್ಲಿ ತಮ್ಮ ಹಿತ ಅಡಗಿದೆ ಎಂದು ಜಿ.ಟಿ.ದೇವೇಗೌಡ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಹಿಂದ ಸಮುದಾಯದ ಮತಗಳನ್ನು ಗಣನೀಯ ಒ್ರಮಾಣದಲ್ಲಿ ನೀವು ಪಡೆಯಿರಿ.ಪ್ರಬಲ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ನಿಮಗೆ ದಕ್ಕುವಂತೆ ಮಾಡುತ್ತೇನೆ.ಆ ಮೂಲಕ ನಿಮ್ಮ ಗೆಲುವು ಸುಲಭವಾಗುತ್ತದೆ ಎಂದು ಜಿಟಿಡಿ ಕೈ ಪಾಳಯದ ನಾಯಕರಿಗೆ ಅಭಯ ನೀಡಿದ್ದಾರೆ.

ಉನ್ನತ ಮೂಲಗಳ ಪ್ರಕಾರ,ಮುಂದಿನ ದಿನಗಳಲ್ಲಿ ಜಿಟಿಡಿ ಕಾಂಗ್ರೆಸ್ ಸೇರಲು ಉದ್ದೇಶಿಸಿದ್ದಾರೆ. ಜತೆಗೆ ತಮ್ಮೊಂದಿಗೆ ಜೆಡಿಎಸ್ ನ ಹಲ ಶಾಸಕರನ್ನು ಕರೆದೊಯ್ಯಲು ತಂತ್ರ ಮಾಡಿದ್ದಾರೆ.

ಜಿಟಿಡಿ ಅವರ ಈ ತಂತ್ರಗಾರಿಕೆ ಏಕಕಾಲಕ್ಕೆ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ವಿಸ್ಮಯ ಮೂಡಿಸಿದೆ. ಈ ಮಧ್ಯೆ ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲು ಅವರ ಶಕ್ತಿ ಎಲ್ಲೆಡೆ ಹರಡದಂತೆ ನೋಡಿಕೊಳ್ಳುವ ತಂತ್ರದ ಭಾಗವಾಗಿ ಹುಣಸೂರಿನಲ್ಲಿ ನಾಯಕ ಸಮುದಾಯದ ಮತಗಳನ್ನು ವಶೀಕರಿಸಿಕೊಳ್ಳಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದ್ದು, ಅದರ ನಡುವೆ ಜಿಟಿಡಿ ಹೊಡೆತ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಲಿದೆ. ಜತೆಗೆ ಬಿಜೆಪಿಯ ವಿಶ್ವನಾಥ್ ಅವರಲ್ಲೂ ಆತಂಕ ಮೂಡಿಸಿದೆ.

Leave a Comment