ಹುಚ್ಚು ಮಂಗನ ದಾಳಿ: ಇಬ್ಬರಿಗೆ ಗಾಯ

ಬಾಗಲಕೋಟ, ಆ 10- ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಹುಚ್ಚು ಮಂಗವೊಂದರ ಹಾವಳಿ ಹೆಚ್ಚಾಗಿದ್ದು, ಇಬ್ಬರ ವ್ಯಕ್ತಿಗಳ ಮೇಲೆ ಈ ಹುಚ್ಚು ಮಂಗ ದಾಳಿ ಮಾಡಿದ್ದು, ಇದರಿಂದ ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕಮತಗಿಯ ಶ್ರೀ ಹುಚ್ಚೇಶ್ವರ ಪ್ರೌಢ ಶಾಲೆಯ ಕರಣಿಕ ಶಿವಾನಂದ ಇಟಗಿ ಅವರ ಮೇಲೆ ಹುಚ್ಚು ಮಂಗ ದಾಳಿ ಮಾಡಿದ್ದು, ಅವರ ಎಡಗೈಗೆ ತೀವ್ರವಾಗಿ ಕಚ್ಚಿದ ಪರಿಣಾಮ ರಕ್ತಸ್ರಾವವಾಗಿದೆ ಎಂದು ತಿಳಿದು ಬಂದಿದೆ.
ನಿನ್ನೆ ಬಸ್ ಕಂಡಕ್ಟರ್ ರಮೇಶ್ ಉಕ್ಕಲಿ ಎಂಬುವವರ ಮೇಲೆಯೂ ಈ ಮಂಗ ದಾಳಿ ಮಾಡಿದೆ ಎನ್ನಲಾಗಿದೆ.
ಈ  ಮಂಗ ಕಳೆದ ಮೂರ್ನಾಲ್ಕು ದಿನಗಳಿಂದ ಕಂಡ ಕಂಡವರ ಮೇಳೆ ದಾಳಿ ಮಾಡುತ್ತಿದ್ದು, ಕಮತಗಿಯ ಜನತೆ ನಮ್ಮ ಮೇಲೆ ಮಂಗ ದಾಳಿ ಮಾಡೀತು ಎಂಬ ಭಯದಲ್ಲಿಯೇ ದಿನ ದೂಡುತ್ತಿದ್ದಾರೆ.
ಪಟ್ಟಣದ ಹೊರ ವಲಯದ ವಾರಿ ಆಂಜನೇಯ ದೇವಸ್ಥಾನದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಈ ಹುಚ್ಚು ಮಂಗ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಸ್ಥಳಿಯರಾದ ಕೃಷ್ಣಾ ಹೊಸಮನಿ, ಚೇತನ ತಿಗಡಿ ಹೇಳಿದ್ದಾರೆ.
ದಿನ ಕಳೆದಂತೆ ಮಂಗನ ಹಾವಳಿ ಹೆಚ್ಚಾಗುತ್ತಿದ್ದು ಸಂಬಂಧಪಟ್ಟ  ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಂಗವನ್ನು ಹಿಡಿದು  ಅರಣ್ಯ ಪ್ರದೇಶಕ್ಕೆ   ಬಿಟ್ಟು ಬರುವ ನಿಟ್ಟಿನಲ್ಲಿ  ಸೂಕ್ತ ಕ್ರಮ  ಜರುಗಿಸಬೇಕು, ಇಲ್ಲದಿದ್ದರೇ  ಪ್ರತಿಭಟನೆ  ಮಾಡಲಾಗುವುದೆಂದು  ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Comment