ಹಿರೇರಾಯಿಕುಂಪಿ : ವೆಂಕಟೇಶಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

ರಾಯಚೂರು.ಜ.22- ಕೃಷ್ಣಾ ನದಿ ಪ್ರವಾಹದ ಸಂದರ್ಭದಲ್ಲಿ ಹಿರೇರಾಯಿಕುಂಪಿ ಬಾಲಕನ ಸಾಹಸಕ್ಕೆ ಜಿಲ್ಲೆಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದೊರೆತಿದೆ.
ಜ.26 ರಂದು ದೆಹಲಿಯಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಆ.10 ರಂದು ಕೃಷ್ಣಾ ನದಿಯಲ್ಲಿ ಭಾರೀ ಪ್ರವಾಹದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಅಗತ್ಯತೆಯಿಂದ ಆಂಬುಲೆನ್ಸ್ ನದಿ ದಾಟುವ ಸಂದರ್ಭದಲ್ಲಿ ಪ್ರವಾಹದಲ್ಲಿ ದಾರಿ ಕಾಣದೇ, ಆಪತ್ತಿಗೆ ಗುರಿಯಾಗಿತ್ತು. ಆದರೆ, ಈ ಸಂದರ್ಭದಲ್ಲಿ ಪ್ರವಾಹದ ಮಧ್ಯೆಯೂ ನದಿ ದಾಟುತ್ತಿದ್ದ ಹಿರೇರಾಯಿಕುಂಪಿ ಗ್ರಾಮದ ವೆಂಕಟೇಶ ತಂದೆ ದೇವೇಂದ್ರಪ್ಪ (13) ಆಂಬುಲೆನ್ಸ್‌ಗೆ ದಾರಿ ತೋರಿಸುವ ಶೌರ್ಯ ಮೆರೆದಿದ್ದನು.
ಈ ಘಟನೆ ಮಾಧ್ಯಮ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗಿ ಪರಿಣಮಿಸಿತ್ತು. ಅನೇಕ ಕಡೆಯಿಂದ ಬಾಲಕನ ಸಾಹಸಕ್ಕೆ ಪ್ರಶಂಸೆ ವ್ಯಕ್ತಗೊಂಡಿದ್ದವು. ಬಾಲಕನ ಈ ಸಾಹಸ ಮೆಚ್ಚಿ ಆ.15 ರಂದು ಜಿಲ್ಲಾಡಳಿತದಿಂದ ಸ್ವಾತಂತ್ರಯೋತ್ಸವ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅಲ್ಲದೇ, ಕೇರಳದ ಕ್ಯಾಲಿಕಟ್‌ನ ಹೆಲ್ಪಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್ ವೆಂಕಟೇಶನನ್ನು ಕೇರಳಕ್ಕೆ ಕರೆಸಿಕೊಂಡು ಸನ್ಮಾನಿಸಿ ಗೌರವಿಸಿತು.
ಅತ್ಯಂತ ಬಡ ಕುಟುಂಬದಲ್ಲಿರುವ ವೆಂಕಟೇಶಗೆ ಮನೆ ಕಟ್ಟಿಕೊಡಲು ಸಂಸ್ಥೆ ಮುಂದಾಗಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೇಂದ್ರ ಸರ್ಕಾರ ಪ್ರಕಟಿಸಿದ ಶೌರ್ಯ ಪ್ರಶಸ್ತಿಗೆ ಕರ್ನಾಟಕದಲ್ಲಿ ಇಬ್ಬರು ಆಯ್ಕೆಗೊಂಡಿದ್ದು, ಇವರಲ್ಲಿ ವೆಂಕಟೇಶ ಸಹ ಒಬ್ಬರಾಗಿದ್ದಾರೆ. ವೆಂಕಟೇಶ ಜ.26 ರಂದು ಬೆಂಗಳೂರಿನಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ದೇಶದ ಅತ್ಯಂತ ಪ್ರತಿಷ್ಠಿತ ಈ ಪ್ರಶಸ್ತಿ ಪಡೆಯುವ ಮೂಲಕ ವೆಂಕಟೇಶ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹಿರೇರಾಯಿಕುಂಪಿ ಮಾತ್ರವಲ್ಲದೇ, ಜಿಲ್ಲೆಯಾದ್ಯಂತ ಬಾಲಕ ವೆಂಕಟೇಶಗೆ ದೇಶದ ಅತ್ಯುನ್ನತ ಪ್ರಶಸ್ತಿ ದೊರೆತಿರುವುದಕ್ಕೆ ಅತ್ಯಂತ ಸಂತಸ ವ್ಯಕ್ತಗೊಂಡಿದೆ.

Leave a Comment