ಹಿರಿಯ ವೈದ್ಯಾಧಿಕಾರಿ ಡಾ. ಗೋವಿಂದಶೆಟ್ಟಿಗೆ ಅಭಿನಂದನೆ

ತಿ.ನರಸೀಪುರ ಮೇ 31: ನಿವೃತ್ತಗೊಂಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಗೋವಿಂದಶೆಟ್ಟಿ ಅವರನ್ನು ಶನಿವಾರ ಅಭಿನಂದಿಸಿ ಬೀಳ್ಕೊಡಲಾಯಿತು.
ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಯೋಸಹಜ ನಿವೃತ್ತಿಗೊಂಡ ಡಾ. ಗೋವಿಂದಶೆಟ್ಟಿಯವರನ್ನು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಅಭಿನಂದಿಸಿದರು.
ತಾ.ಪಂ. ಮಾಜಿ ಉಪಾಧ್ಯಕ್ಷ ಬಿ. ಮರಯ್ಯ ಮಾತನಾಡಿ, ಡಾ. ಗೋವಿಂದಶೆಟ್ಟಿಯವರು ತಮ್ಮ ಉತ್ತಮ ಆರೋಗ್ಯ ಸೇವೆ ನೀಡುವ ಮೂಲಕ ತುಂಬಾ ಜನಾನುರಾಗಿಯಾಗಿದ್ದರು. ಬಹುತೇಕ ಮಂದಿ ಚಿಕಿತ್ಸೆಗೆ ಬಂದವರು ಇವರನ್ನೇ ಕಾದು ಚಿಕಿತ್ಸೆ ಪಡೆಯುತ್ತಿದ್ದರು. ಈ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡಿ ಜನಮನ್ನಣೆ ಗಳಿಸಿದವರಲ್ಲಿ ಇವರು ತುಂಬಾ ಖ್ಯಾತಿ ಪಡೆದಿದ್ದಾರೆ. ಇವರ ಸೇವೆ ಇಲ್ಲಿಗೆ ಮತ್ತಷ್ಟು ಬೇಕಿತ್ತು. ಆದರೆ ಸರ್ಕಾರದ ನಿಯಮದ ಪ್ರಕಾರ ನಿವೃತ್ತಿ ಅನಿವಾರ್ಯ. ಇವರು ಖಾಸಗಿಯಾದರೂ ಜನರಿಗೆ ಅಗತ್ಯ ಆರೋಗ್ಯ ಸೇವೆ ಮುಂದುವರೆಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಇದೇ ವೇಳೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ತಲಕಾಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡ ಡಾ. ಜ್ಯೋತಿ ಅವರನ್ನೂ ಕೂಡ ಸನ್ಮಾನಿಸಲಾಯಿತು.
ತಾ.ಪಂ. ಮಾಜಿ ಉಪಾಧ್ಯಕ್ಷ ಬಿ. ಮರಯ್ಯ, ವೈನ್ಸ್ ಸ್ಟೋರ್ ಗುರು ಅವರು ವೈದ್ಯ ಡಾ.ಗೋವಿಂದಶೆಟ್ಟಿಯವರನ್ನು ಸನ್ಮಾನಿಸಿದರು. ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಡಾ.ಎಸ್. ಚಂದ್ರಶೇಖರ್ ವೈದ್ಯರ ಸ್ಮರಣೀಯ ಸೇವೆ ಕುರಿತು ಮಾತನಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್, ಡಾ. ಉಪ್ಪಿನಾಳ್, ಡಾ. ಜಗನ್ನಾಥ್, ಡಾ. ನವೀನ್, ಡಾ.ಶ್ರೀನಿವಾಸ್, ಡಾ.ಶಿವಣ್ಣ, ಡಾ. ಭಾರತಿ, ನೇತ್ರಪರೀಕ್ಷಕ ಆರ್. ಉಮೇಶ್ ಕುಮಾರ್, ಗ್ರಾ.ಪಂ ಮಾಜಿ ಸದಸ್ಯ ದಿವಾಕರ, ಚಂದ್ರಸೇನಾ ಮತ್ತಿತರರು ಹಾಜರಿದ್ದರು.

Share

Leave a Comment