ಹಿರಿಯ ನಾಗರೀಕರ ಪ್ರತಿಭೆಯ ಅನಾವರಣ

ದಾವಣಗೆರೆ, ಸೆ. 9 – ಹಿರಿಯ ನಾಗರಿಕರಲ್ಲೂ ಸಹ ಪ್ರತಿಭೆ ಇದೆ. ಅದನ್ನು ಅನಾವರಣಗೊಳಿಸುವ ಅವಶ್ಯಕತೆ ಇದೆ ಆದ್ದರಿಂದ ಸುಮ್ಮನೆ ಕೂರದೆ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಮೇಯರ್ ಶೋಭಾ ಪಲ್ಲಾಗಟ್ಟೆ ಸಲಹೆ ನೀಡಿದರು.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಬಾಪೂಜಿ ಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಜಿಲ್ಲೆಯಲ್ಲಿ ಹಿರಿಯ ನಾಗರೀಕರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ 2018ರ ಪ್ರಯುಕ್ತ ಹಿರಿಯ ನಾಗರೀಕರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರೀಕರಿಗೆ ದೇಹಕ್ಕೆ ವಯಸ್ಸಾಗಿದೆ ಹೊರತು ಅವರ ಮನಸ್ಸಿಗಲ್ಲ. ಸದಾ ಚಟುವಟಿಕೆಯಿಂದ ತೊಡಗಿಕೊಂಡರೆ ನಿಮಗೆ ವಯಸ್ಸಾಗಿರುವುದು ತಿಳಿಯುವುದಿಲ್ಲ, ಮಕ್ಕಳು ಪೋಷಕರನ್ನು ವೃದ್ದಾಶ್ರಮಕ್ಕೆ ಕಳುಹಿಸುವುದನ್ನು ಕಡಿಮೆ ಮಾಡಿ. ಅವರನ್ನು ಸಾಕುವಂತ ಕೆಲಸವಾಗಬೇಕೆಂದು ಸಲಹೆ ನೀಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಜಿ.ಎಸ್.ಶಶಿಧರ್ ಮಾತನಾಡಿ, 60 ವರ್ಷ ಮೇಲ್ಪಟ್ಟವರನ್ನು ರಾಜ್ಯ ಸರ್ಕಾರ ಹಿರಿಯ ನಾಗರಿಕರೆಂದು ಗುರುತಿಸಿದೆ. ಅದೇ ರೀತಿ ಕೇಂದ್ರ ಸರ್ಕಾರ 58 ವರ್ಷ ಮೇಲ್ಪಟ್ಟವರನ್ನು ಹಿರಿಯ ನಾಗರೀಕರನ್ನು ಪರಿಗಣನೆ ಮಾಡಿದೆ. ಕೆಲವರು ಹೇಳುತ್ತಾರೆ ಹಿರಿಯ ನಾಗರಿಕರು ನಿಂತ ನೀರು ಅಂತ. ಆದರೆ ಅವರು ನಿಂತ ನೀರಲ್ಲಾ. ಅವರಲ್ಲೂ ಸಹ ಅಗಾಧವಾದ ಪ್ರತಿಭೆ ಇದೆ. ಅವರಲ್ಲಿ ಚೈತನ್ಯ ಮೂಡುವುದಕ್ಕೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ 60ರಿಂದ 70 ವಯೋಮಾನದ ಹಿರಿಯ ಪುರುಷರಿಗೆ 100 ಮೀಟರ್ ಓಟ, 3 ಕೆಜಿ ಗುಂಡು ಎಸೆತ, 71 ರಿಂದ 80 ವರ್ಷದವರಿಗೆ 75 ಮೀಟರ್ ಓಟ, 3 ಕೆಜಿ ಗುಂಡು ಎಸೆತ, 80 ವರ್ಷ ಮೇಲ್ಪಟ್ಟವರಿಗೆ 200 ಮೀಟರ್ ನಡಿಗೆ, ಕ್ರಿಕೇಟ್ ಚೆಂಡು ಎಸೆತ, ಮಹಿಳಾ ವಿಭಾಗದಲ್ಲಿ 60 ರಿಂದ 70 ವರ್ಷದವರಿಗೆ 4 ಮೀಟರ್ ನಡಿಗೆ, ಕ್ರಿಕೇಟ್ ಚೆಂಡು ಎಸೆತ, 71 ರಿಂದ 80 ವರ್ಷ 200 ಮೀಟರ್ ನಡಿಗೆ, ಕ್ರಿಕೇಟ್ ಚೆಂಡು ಎಸೆತ, 80 ವರ್ಷ ಮೇಲ್ಪಟ್ಟವರಿಗೆ 100 ಮೀಟರ್ ನಡಿಗೆ, ಕ್ರಿಕೇಟ್, ಚೆಂಡು ಎಸೆತ, 60 ರಿಂದ 80 ವರ್ಷ ಪುರುಷ ಮತ್ತು ಮಹಿಳೆಯರಿಗೆ ಸಾಂಸ್ಕೃತಿಕ ಸ್ಪರ್ಧೆಗಳು, ಏಕಪಾತ್ರ ಅಭಿಯನ, ಜಾನಪದ ಗೀತೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಹಿರಿಯ ನಾಗರೀಕ ಸಂಘದ ಗೌರವ ಕಾರ್ಯದರ್ಶಿ ಗುರುಮೂರ್ತಿ, ಸುರಕ್ಷಾ ಮಲ್ಟಿಪರ್ಪಸ್ ಡೆವಲಪ್ ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷ ಷಾನವಾಜ್ ಚಿತ್ತೆವಾಲೆ, ವಿಜಯ್ ಕುಮಾರ ಕೆ.ಹೆಚ್, ಪ್ರಕಾಶ್ ಇದ್ದರು.

Leave a Comment