ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ನಿಧನ

ಹೈದರಾಬಾದ್, ಜೂ 27 -ಖ್ಯಾತ ಚಲನಚಿತ್ರ ನಟಿ, ನಿರ್ಮಾಪಕಿ ಮತ್ತು ನಿರ್ದೇಶಕಿ ವಿಜಯ್ ನಿರ್ಮಲಾ ಅವರು ಹೃದಯಾಘಾತದಿಂದ ಬುಧವಾರ ರಾತ್ರಿ ಇಲ್ಲಿನ ಗಾಚಿಬೌಲಿಯ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತಿ ಹಾಗೂ ಖ್ಯಾತ ನಟ ಕೃಷ್ಣ, ಪುತ್ರ ಹಾಗೂ ನಟ ನರೇಶ್ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

 ವಿಜಯಾ ನಿರ್ಮಲಾ ಅವರು ತೆಲುಗಿನ 44 ಚಿತ್ರಗಳಿಗೆ ನಿರ್ದೇಶನ ನಿಡಿದ್ದಾರೆ. 2002ರಲ್ಲಿ ಅತಿ ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಿದ ಮಹಿಳಾ ನಿರ್ದೇಶಕಿ ಎಂಬ ಖ್ಯಾತಿಗೂ ಪಾತ್ರರಾಗಿ ಗಿನ್ನೆಸ್ ಬುಕ್ ರೆಕಾರ್ಡ್‌ನಲ್ಲಿ ದಾಖಲಾದರು.

ಅಪ್ರತಿಮ ನಟ ಶಿವಾಜಿ ಗಣೇಶನ್ ಅವರ ಚಿತ್ರಕ್ಕೆ ನಿರ್ದೇಶಿಸಿದ ಇಬ್ಬರು ಮಹಿಳಾ ನಿರ್ದೇಶಕಿಯರ ಪೈಕಿ ವಿಜಯಾ ಕೂಡ ಒಬ್ಬರು. ತೆಲುಗು ನಟಿ ಸಾವಿತ್ರಿ ಮತ್ತೊಬ್ಬ ನಿರ್ದೇಶಕಿಯಾಗಿದ್ದಾರೆ.

1946 ಫೆಬ್ರವರಿ 20ರಂದು ತಮಿಳುನಾಡಿನಲ್ಲಿ ಜನಿಸಿದ ವಿಜಯಾ ನಿರ್ಮಲಾ ಅವರು, 1950ರಲ್ಲಿ ತಮ್ಮ ಏಳನೆ ವಯಸ್ಸಿನಲ್ಲಿ ತಮಿಳಿನ ‘ಮಚ್ಚಾ ರೇಖಯಿ’ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ನಟನೆ ಆರಂಭಿಸಿದ್ದರು.

ಅವರು ತೆಲುಗು ಸಿನೆಮಾ ರಂಗಕ್ಕೆ 1957 ರಲ್ಲಿ ಪಾಂಡುರಂಗ ಮಹಾತ್ಯಂ ಚಿತ್ರದೊಂದಿಗೆ ಪಾದಾರ್ಪಣೆ ಮಾಡಿದರು. ನಂತರ ಅವರು 1971ರಲ್ಲಿ ಮೀನಾ ಚಿತ್ರದ ನಿರ್ದೇಶನದೊಂದಿಗೆ  44 ಚಲನಚಿತ್ರಗಳನ್ನು ನಿರ್ದೇಶಿಸಿದರು. ನೆರಮು ಸಿಕ್ಷಾ (2009 ರಲ್ಲಿ) ಅವರ ಕೊನೆಯ ಚಿತ್ರವಾಗಿದೆ.

ವಿಜಯಾ ನಿರ್ಮಲಾ ಅವರು ತೆಲುಗು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 2008ರಲ್ಲಿ ರಘುಪತಿ ವೆಂಕಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ವಿಜಯಾ ನಿರ್ಮಲಾ ತಂದೆ ಕೂಡ ಚಿತ್ರ ನಿರ್ಮಾಪಕರು. ಅವರ ಪುತ್ರ ನರೇಶ್ ಅವರು ವಿಜಯಾ ಅವರ ಮೊದಲ ಪತಿ ಕೃಷ್ಣ ಮೂರ್ತಿ ಅವರಿಂದ ಜನಿಸಿದ್ದರು. ಮೊದಲ ಪತಿಗೆ ವಿಚ್ಛೇದನ ನೀಡಿದ ಬಳಿಕ ವಿಜಯಾ ಅವರು ಖ್ಯಾತ ನಟ ಕೃಷ್ಣ ಅವರನ್ನು ಮದುವೆಯಾಗಿದ್ದರು.

Leave a Comment