ಹಿಮಪಾತ: ಜಮ್ಮು-ಕಾಶ್ಮೀರ ಹೆದ್ದಾರಿ ಬಂದ್

ಶ್ರೀನಗರ, ಜ. ೧೧: ಮೈದಾನ ಪ್ರದೇಶ ಸೇರಿದಂತೆ ಬಹುತೇಕ ಕಾಶ್ಮೀರದಾದ್ಯಂತ ಇಂದು ವಿಪರೀತ ಹಿಮ ಪಾತವಾಗಿದ್ದು, ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಕಣಿವೆ ರಾಜ್ಯಕ್ಕೆ ದೇಶದ ಉಳಿದ ಭಾಗಗಳಿಂದ ಸರ್ವಋತು ರಸ್ತೆ ಸಂಪರ್ಕ ಮಾತ್ರ ಲಭ್ಯವಿದೆ.ಮುಂದಿನ ೨೪ ಗಂಟೆಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ಮಧ್ಯರಾತ್ರಿಯಿಂದ ಇಂದು ಬೆಳಗಿನವರೆಗೂ ಹೊಸದಾಗಿ ದಟ್ಟ ಹಿಮ ಪಾತವಾಗಿದೆ ಎಂದು ಇಲ್ಲಿನ ಹವಾಮಾನ ಇಲಾಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಇಂದು ಬೆಳಗ್ಗೆ ೮-೩೦ರಲ್ಲಿ ೫.೬ ಮಿ.ಮೀ.ಗಳಷ್ಟು ಮಂಜಿನ ಮಳೆ ಸಂಭವಿಸಿದೆ.

ಮತ್ತೊಮ್ಮೆ ಭೂಕಂಪನ:
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿಂದು ಮತ್ತೊಮ್ಮೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಈ ಬಾರಿ ೩.೦ ಪ್ರಮಾಣ ದಾಖಲಾಗಿದೆ. ಯಾವುದೇ ಜೀವ ಹಾನಿ ಅಥವಾ ಆಸ್ತಿ ಪಾಸ್ತಿ ನಷ್ಟದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ೨೪ ಗಂಟೆಗಳಲ್ಲಿ ಶ್ರೀನಗರದಲ್ಲಿ ಭೂ ಕಂಪನವಾಗುತ್ತಿರುವುದು ಇದು ೨ನೇ ಬಾರಿಯಾಗಿದೆ. ಇಂದು ಬೆಳಗ್ಗೆ ೮.೨೧ರಲ್ಲಿ ಇದು ಸಂಭವಿಸಿದೆ; ಉತ್ತರಕ್ಕೆ ೩೪.೧ ಡಿಗ್ರಿ ಅಕ್ಷಾಂಶ ಹಾಗೂ ಪೂರ್ವಕ್ಕೆ ೭೪.೮ ಡಿಗ್ರಿ ರೇಖಾಂಶದ ನಡುವೆ ಹಳೆ ನಗರ ಪ್ರದೇಶದ ೧೦ ಕಿ.ಮೀ. ನೆಲದಾಳದಲ್ಲಿ ಈ ಭೂಕಂಪನದ ಕೇಂದ್ರ ಬಿಂದುವಿದ್ದುದು ಕಂಡುಬಂದಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರವಷ್ಟೇ ರಿಕ್ಟರ್ ಮಾಪನದ ೪.೬ ರಷ್ಟು ಪ್ರಮಾಣದ ಭೂ ಕಂಪನ ರಾಜ್ಯದ ಲಡಾಖ್ ಪ್ರದೇಶದಲ್ಲಿ ಉಂಟಾಗಿತ್ತು. ಆಗ ಅದರ ಕೇಂದ್ರ ಬಿಂದು ಉತ್ತರಕ್ಕೆ ೩೪.೩೯ ಡಿಗ್ರಿ ಹಾಗೂ ಪೂರ್ವಕ್ಕೆ ೭೮.೨೧ ಡಿಗ್ರಿ ವ್ಯಾಪ್ತಿಯಲ್ಲಿತ್ತು.

Leave a Comment