ಹಿಡಿಯಲು ಬಂದ ಪೊಲೀಸ್ ಪೇದೆಗೆ ಇರಿದ ಕಳ್ಳ

ಬೆಂಗಳೂರು, ಅ. ೧೨- ರೈಲಿನಲ್ಲಿ ಕಳವು, ಸರಗಳವು, ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧಿಸಲು ಬಂದ ಸಿಟಿ ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್ ಅಲ್ಲಾವುದ್ದೀನ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಚಾಕು ಇರಿತದಿಂದ ಕುತ್ತಿಗೆಗೆ ಗಂಭೀರವಾಗಿ ಗಾಯಗೊಂಡಿರುವ ಅಲ್ಲಾವುದ್ದೀನ್ (23) ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಳ್ಳತನ, ಸರಗಳವು, ಬೆದರಿಕೆ ಇನ್ನಿತರ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೊಹ್ಮದ್ ಅಲಿ ಯಶವಂತಪುರದ ಶರೀಫ್ ನಗರದಲ್ಲಿ ಅಡಗಿರುವ ಖಚಿತ ಮಾಹಿತಿಯಾಧರಿಸಿ ಅಲ್ಲಾವುದ್ದೀನ್ ಸೇರಿ ಮೂವರು ಸಿಟಿ ರೈಲ್ವೆ ಪೊಲೀಸರು ನಿನ್ನೆ ಸಂಜೆ ಕಾರ್ಯಾಚರಣೆಗಿಳಿದಿದ್ದಾರೆ.

ಶರೀಫ್ ನಗರದ ಮೂರು ಕಡೆಗಳಲ್ಲಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಅಲ್ಲಾವುದ್ದೀನ್‌ಗೆ ಮೊಹ್ಮದ್ ಅಲಿ ಕಂಡು ಬಂದಿದ್ದಾನೆ. ಕೂಡಲೇ ಆತನನ್ನು ಬೆನ್ನಟ್ಟಿ ಹಿಡಿಯಲು ಹೋದ ಅಲ್ಲಾವುದ್ದೀನ್‌ಗೆ ಜೇಬಿನಲ್ಲಿದ್ದ ಚಾಕು ತೆಗೆದು ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಲ್ಲಾವುದ್ದೀನ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೊಹ್ಮದ್ ಅಲಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ರೈಲ್ವೆ ಎಸ್ಪಿ ಚೈತ್ರ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿರುವ ಯಶವಂತಪುರ ಪೊಲೀಸ್ ಇನ್ಸ್‌ಪೆಕ್ಟರ್ ಮುದ್ದುರಾಜು ಅವರು ಆರೋಪಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

Leave a Comment