ಹಿಂದೂ ನಾಯಕರಿಗೆ ಗರಿಷ್ಠ ಭದ್ರತೆ ಒದಗಿಸಿ’

ಉಡುಪಿ, ಜ.೧೧- ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಭಜರಂಗದಳ ಪ್ರಮುಖ ಶರಣ್ ಪಂಪ್‌ವೆಲ್ ಮತ್ತು ವಿಹಿಪ ನಾಯಕ ಜಗದೀಶ್ ಶೇಣವ ಹತ್ಯೆಗೆ ಸಂಚು ರೂಪಿಸಿರುವ ಸಂಗತಿಯನ್ನು ಗುಪ್ತಚರ ಇಲಾಖೆ ಬಯಲು ಮಾಡಿದ್ದು ಈ ಕುರಿತು ಅಗತ್ಯ ಭದ್ರತೆ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ತಿಳಿಸಿದೆ. ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ರೀತಿಯಲ್ಲಿ ವಿಳಂಬ ಮಾಡದೆ ಹಿಂದೂ ನಾಯಕರಿಗೆ ಗರಿಷ್ಠ ಭದ್ರತೆ ಒದಗಿಸಬೇಕು ಎಂದು ಬಿಜೆಪಿ ಮುಖಂಡ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ರಾಷ್ಟ್ರೀಯ ವಾದಿ, ಹಿಂದೂಪರ ಸಂಘಟನೆಗಳ ದಮನಕ್ಕೆ ವಿದೇಶಿ ಶಕ್ತಿಗಳ ಜೊತೆಗೆ ಕೆಲವು ಸಮಾಜಘಾತುಕರು ಕೈ ಜೋಡಿಸಿದ್ದು ಅವರನ್ನು ಎದುರಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ ಎಂದು ಯಶ್‌ಪಾಲ್ ಎಚ್ಚರಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಕಾರಣ ನಿರ್ದಿಷ್ಟ ಸಮುದಾಯವೊಂದರ ಮತ ಕ್ರೋಡೀಕರಣಕ್ಕೆ ಮುಂದಾಗಿದೆ.ಈ ಹಿಂದೆಯೂ ಹಲವಾರು ಬಾರಿ ಚುನಾವಣೆಯ ಸಮಯದಲ್ಲಿ ಹಿಂದೂ ಮುಖಂಡರ ಹತ್ಯೆ ಯತ್ನ ನಡೆಸಿ ಕೋಮುಗಲಭೆ ಎಬ್ಬಿಸುವ ಹುನ್ನಾರ ನಡೆದಿತ್ತು. ಸಮಾಜದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವವರನ್ನು ಸರ್ಕಾರ ಮಟ್ಟ ಹಾಕಬೇಕು ಎಂದು ಯಶಪಾಲ್ ಒತ್ತಾಯಿಸಿದ್ದಾರೆ. ವಿದೇಶದಿಂದ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಪ್ರಭಾಕರ ಭಟ್‌ರನ್ನು ಅವರ ನಿವಾಸದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ, ಪಂಪ್‌ವೆಲ್, ಶೇಣವ ಮನೆಗೆ ಭದ್ರತೆಯನ್ನು ಒದಗಿಸಲಾಗಿದೆ.

 

Leave a Comment