ಹಿಂದೂ ದೌರ್ಜನ್ಯಕ್ಕೆ ತಕ್ಕ ಉತ್ತರ: ಹಸಂತ್ತಡ್ಕ

ಪುತ್ತೂರು, ಅ.೧೨- ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಹಿಂದುತ್ವದ ಮೇಲೆ ಗದಾಪ್ರಹಾರ, ಹಿಂದೂ ಧರ್ಮದ ಮಾನಬಿಂಧುಗಳ ಅವಹೇಳನ ರಾಜ್ಯದಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಈ ಎಲ್ಲಾ ಕೃತ್ಯಗಳನ್ನು ಎಸಗುತ್ತಿರುವ ಮತಾಂಧ ಶಕ್ತಿಗಳಿಗೆ ರಾಜ್ಯ ಸರ್ಕಾರ ನೇರ ಕುಮ್ಮಕ್ಕು ನೀಡುತ್ತಿದೆ . ಮುಂದೆಯೂ ಹೀಗೆಯೇ ಹಿಂದೂ ಸಮಾಜದ ಮೇಲೆ ದೌರ್ಜನ್ಯ-ಅನ್ಯಾಯ ಮುಂದುವರಿದಲ್ಲಿ ಅದನ್ನು ಸಹಿಸಿಕೊಂಡು ಕೂರಲು ನಾವು ಸಿದ್ಧರಿಲ್ಲ. ಹಿಂದೂ ಧಮನ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಜರಂಗದಳ ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತ್ತಡ್ಕ ಅವರು ಎಚ್ಚರಿಸಿದರು.

ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿ ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಹಿಂದೂ ದಮನ ನೀತಿ ಅನುಸರಿಸುತ್ತಿದ್ದು, ರಾಜ್ಯವನ್ನು ಇಸ್ಲಾಮೀಕರಣಗೊಳಿಸುವ ಪ್ರಯತ್ನಕ್ಕೆ ಸರ್ಕಾರ ಪ್ರತ್ಯಕ್ಷ ಬೆಂಬಲ ನಿಡುತ್ತಿದೆ. ರಾಜ್ಯದಲ್ಲಿ ಪರಿವಾರ ಸಂಘಟನೆಗಳ ೨೦ಕ್ಕೂ ಹೆಚ್ಚು ಕಾರ್ಯಕರ್ತರ ಕೊಲೆಯಾದರೂ ಸರ್ಕಾರ ಕೈಕಟ್ಟಿ ಕುಳಿತಿರುವುದೇ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಸರ್ಕಾರದ ಈ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಮತ್ತು ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ  ಜಿಲ್ಲೆಯ ೧೦೦ ಕಡೆಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿವೆ ಎಂದು ರಾಷ್ಟ್ರೀಯ ತನಿಖಾ ದಳ ಎನ್‌ಐಎ ಹೇಳಿದೆ. ಆದರೆ ಪರಿವಾರ ಸಂಘಟನೆಗಳೇ ನಮಗೆ ಸವಾಲು. ಅವುಗಳ ನಿಯಂತ್ರಣವೇ ನಮ್ಮ ಗುರಿ ಎಂದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿಕೆ ನೀಡಿದ್ದು, ಹಿಂದೂ ಸಂಘಟನೆಗಳನ್ನು ನಿಷೇಧಿಸುವ ಹುನ್ನಾರ ನಡೆಯುತ್ತಿದೆ ಎಂದು ಅವರು ದೂರಿದರು.

ಹಿಂದೂ ಕಾರ್ಯಕರ್ತರಿಗೆ ನ್ಯಾಯ ದೊರಕಿಸಿಕೊಡಲು ಮುಂದಾದ ಹಿಂದೂ ಜಾಗರಣಾ ವೇದಿಕೆಯ ಮುಖಂಡರಾದ ವಕೀಲ ಚಿನ್ಮಯ್ ರೈ ಅವರ ಮೇಲೆ ಕೇಸು ದಾಖಲಿಸುವ ಸಂಪ್ಯ ಗ್ರಾಮಾಂತರ ಠಾಣಾ ಎಸ್‌ಐ ಅಬ್ದುಲ್ ಖಾದರ್ ಅವರಿಗೆ ಮತೀಯವಾದವನ್ನು ಮಾಡಲು ಸರ್ಕಾರ ಪ್ರೆರೇಪಿಸುತ್ತಿದೆ. ಆದರೆ ಚಿನ್ಮಯ್ ರೈ ಪ್ರಕರಣ ಮತ್ತು ಬಿ.ಸಿ. ರೋಡು ಪ್ರಕರಣವನ್ನು ಹೈಕೋರ್ಟು ತಡೆ ಹಿಡಿದಿದ್ದು, ಸತ್ಯ, ಧರ್ಮ, ನ್ಯಾಯಕ್ಕೆ ಎಂದಿಗೂ ಜಯ ಸಿಕ್ಕೇ ಸಿಗುತ್ತದೆ ಎಂಬುದು  ಇದರಿಂದ ಸಾಬೀತಾಗಿದೆ ಎಂದವರು ತಿಳಿಸಿದರು.

ದೇಶದ ಕಾರ್ಯ, ಧರ್ಮದ ಕಾರ್ಯ ಮಾಡುತ್ತಿರುವ ಹಿಂದೂ ಸಂಘಟನೆಗಳ ನೇತಾರ ಜಗದೀಶ್ ಕಾರಂತ ಅವರನ್ನು ಯಾವುದೇ ನೊಟೀಸ್ ನೀಡದೆ ಕ್ರಿಮಿನಲ್‌ಗಳನ್ನು ಬಂಧಿಸುವ ರೀತಿಯಲ್ಲಿ  ಬಂಧನ ಮಾಡಿದ್ದೀರಿ. ಆದರೆ ಬಿ.ಸಿ.ರೋಡಿನಲ್ಲಿ ಐಸಿಸ್ ಉಗ್ರ ಸಂಘಟನೆ ಸಕ್ರಿಯವಾಗಿದೆ ಎಂದು ಮುಸ್ಲಿಂ ಮೌಲ್ವಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಆದರೆ ಇಲ್ಲಿವರೆಗೆ ಎಷ್ಟು ಭಯೋತ್ಪಾದಕರನ್ನು, ಸಮಾಜ ಘಾತುಕರನ್ನು ಬಂಧಿಸಿದ್ದೀರಿ ಎಂದು ಅವರು ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ಕ್ಯಾಂಪ್ಕೋ ಸಂಸ್ಥೆ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಮಂಡಲ ಅಧ್ಯಕ್ಷ ಕೆ. ಜೀವಂಧರ್ ಜೈನ್, ಜಿಲ್ಲಾ ಬಿಜೆಪಿ ಕಾರ್ಯಕಾರಿ ಸದಸ್ಯ ಗೋಪಾಲಕೃಷ್ಣ ಹೇರಳೆ, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಧನ್ಯ ಕುಮಾರ್ ಬೆಳಂದೂರು, ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಕಾರ್ಯದರ್ಶಿ ಸತೀಶ್ ಬಿ.ಎಸ್, ವಿಶ್ವ ಹಿಂದೂ ಪರಿಷದ್ ಪ್ರಖಂಡ ಅಧ್ಯಕ್ಷ ಜನಾರ್ಧನ ಬೆಟ್ಟ , ಕಾರ್ಯದರ್ಶಿ ನವೀನ್ ಕುಲಾಲ್ , ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ ನಿತಿನ್ ನಿಡ್ಪಳ್ಳಿ, ಸಹಸಂಚಾಲಕ ಹರೀಶ್ ದೋಳ್ಪಾಡಿ, ಪ್ರಖಂಡ ಗೋರಕ್ಷಾ ಪ್ರಮುಖ್ ಕಿರಣ್ ಕುಮಾರ್ ರಾವ್, ನಗರಸಭಾ ಉಪಾಧ್ಯಕ್ಷ ಬಿ. ವಿಶ್ವನಾಥ ಗೌಡ, ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಬಜತ್ತೂರು, ನಗರಸಭಾ ಸದಸ್ಯರಾದ ರಾಜೇಶ್ ಬನ್ನೂರು,  ಸುಜೀಂಧ್ರ ಪ್ರಭು, ವಿನಯ ಭಂಡಾರಿ, ಹರೀಶ ನಾಕ್ ಮಾಲ್ತೋಟ್ಟು, ಅರ್ಪಣಾ ಶಿವಾನಂದ್, ಮೋಹಿನಿ ದಿವಾಕರ್, ಬಾಲಕೃಷ್ಣ ಸಾಮೆತ್ತಡ್ಕ, ವಿಶ್ವನಾಥ ಕುಲಾಲ್ ಪರ್ಲಡ್ಕ ಮತ್ತಿತರರು ಇದ್ದರು.

Leave a Comment