ಹಿಂದುಳಿದ ವರ್ಗದ ಅಭ್ಯರ್ಥಿಗೆ ಜೆಡಿಎಸ್ ಟಿಕೆಟ್: ಸಚಿವ ಶ್ರೀನಿವಾಸ್

ತುಮಕೂರು, ಮಾ. ೧೪- ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಗೆ ಜೆಡಿಎಸ್ ಟಿಕೆಟ್ ನೀಡಲು ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ತೀರ್ಮಾನಿಸಿದ್ದಾರೆ ಎಂದು ಸಣ್ಣ ಕೈಗಾರಿಕಾ ಸಚಿವ‌ ಎಸ್.ಆರ್. ಶ್ರೀನಿವಾಸ್ ಇಂದಿಲ್ಲಿ ತಿಳಿಸಿದರು. ‌

ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಇಬ್ಬರು ನಾಯಕರಾದ ಚಿ.ನಾ.ಹಳ್ಳಿಯ ಮಾಜಿ ಶಾಸಕ ಸಿ.ಬಿ. ಸುರೇಶ್‌ಬಾಬು ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಅಂತಿಮವಾಗಲಿದೆ ಎಂದು ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಈವರೆಗೆ ತುಮಕೂರು ಲೋಕಸಭಾ ಕ್ಷೇತ್ರ ಹಂಚಿಕೆ ಗೊಂದಲ ಬಗೆಹರಿದಿರಲಿಲ್ಲ. ಆದರೆ ಈಗ ಕ್ಷೇತ್ರವನ್ನು ಮೈತ್ರಿ ಧರ್ಮದ ಪ್ರಕಾರ ಕಾಂಗ್ರೆಸ್ ನಮ್ಮ ಪಕ್ಷಕ್ಕೆ ಬಿಟ್ಟು ಕೊಟ್ಟಿದೆ. ಹೀಗಾಗಿ ಇಂದು ಸಂಜೆಯೊಳಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗ ಅಧಿಕೃತ ಪಟ್ಟಿ ಹೊರ ಬರಲಿದೆ ಎಂದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ತ್ರಿಕೋನ ಸ್ಪರ್ಧೆ ಏರ್ಪಡುತಿತ್ತು. ಆದರೆ ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾ‌ಡಿಕೊಂಡಿರುವುದರಿಂದ ಭಾರತೀಯ ಜನತಾ ಪಾರ್ಟಿಯಿಂದ ಯಾರೇ ಅಭ್ಯರ್ಥಿಯಾದರೂ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾಹಿತಿ ಈವರೆಗೂ ತಮಗಿಲ್ಲ. ಮುಂದಿನ ಬೆಳವಣಿಗೆಗಳು ಯಾವ ರೀತಿಯಾದರೂ ಆಗಬಹುದು. ಆ ಬಗ್ಗೆ ನಾನೇನು ಪ್ರತಿಕ್ರಿಯಸಲಾರೆ ಎಂದರು.

ಕಾಂಗ್ರೆಸ್ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಾರೆ ಎಂಬುದು ಕೇವಲ ವದಂತಿ. ಇದುವರೆಗೂ ಮುದ್ದಹನುಮೇಗೌಡರು ಪಕ್ಷಕ್ಕೆ ಬರುತ್ತಾರೆ ಎಂಬ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ಅಲ್ಲದೆ ಪಕ್ಷಕ್ಕೆ ಬರುವಂತೆ ನಾವು ಅವರನ್ನು ಆಹ್ವಾನಿಸಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಾವೇ ಅವರನ್ನ ಸಂಪರ್ಕಿಸಿ ಅವರನ್ನ ಪಕ್ಷಕ್ಕೆ ಆಹ್ವಾನಿಸೋದಾದ್ರೆ ಕಾಂಗ್ರೆಸ್ ನಲ್ಲಿ ಇದ್ದಾಗಲೇ ಅವರಿಗೆ ಸೀಟು ಬಿಡುತಿದ್ವಿ..
ಹಾಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಿರುವ ಬಗ್ಗ ನನಗೂ ಬೇಸರವಾಗಿದೆ. ಆದರೆ ಎರಡು ಪಕ್ಷದವರು ಸರ್ಕಾರ ನಡೆಸುವಾಗ ಇಂತಹ ಬೆಳವಣಿಗೆಗಳು ಸಹಜ. ಮುಂದೆ ಎಲ್ಲವೂ ಸರಿ ಹೋಗಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲ ನಮಗೆ ಸಿಗಲಿದೆ. ಎಂದು ಅವರು ವಿಶ್ವಾಸದಿಂದ ನುಡಿದರು.

ಮಾಜಿ ಶಾಸಕ ಕೆ.ಎನ್. ರಾಜಣ್ಣನವರು ದೊಡ್ಡವರು. ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಸಚಿವ ಶ್ರೀನಿವಾಸ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Leave a Comment