ಹಿಂದುಗಳ ಆಚರಣೆಗೆ ನಿರ್ಬಂಧ- ಸರ್ಕಾರದ ಕ್ರಮ ಖಂಡಿಸಿ ಆ.18 ರಂದು ಪ್ರತಿಭಟನೆ

ದಾವಣಗೆರೆ, ಆ. 12 – ರಾಜ್ಯ ಸರ್ಕಾರ ಹಿಂದುಗಳ ಹಬ್ಬ ಆಚರಣೆಗಳಿಗೆ ಇಲ್ಲದ ಕಾನೂನು ಸೃಷ್ಟಿಸಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಇದನ್ನು ಖಂಡಿಸಿ ಆ. 18 ರಂದು ರಾಜ್ಯಾದ್ಯಂತ ಶ್ರೀರಾಮಸೇನೆ ಹಾಗೂ ಹಿಂದುಪರ ಸಂಘಟನೆಗಳು ಪ್ರತಿಭಟನೆ ಕೈಗೊಂಡಿವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಪ್ರಸ್ತುತ ಗಣೇಶ ಉತ್ಸವ ಮಾಡುವವರು ವಾದ್ಯ, ಪಟಾಕಿ ಸಿಡಿಸುವುದು, ಘೋಷಣೆ ಕೂಗುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಅಲ್ಲದೆ ಮಸೀದಿ ಬಳಿ ಮೆರವಣಿಗೆ ಮಾಡುವಂತಿಲ್ಲ. ಪ್ರತಿ ಗಣೇಶೋತ್ಸವ ಮಾಡುವವರು 10 ಲಕ್ಷ ರೂ ಬಾಂಡ್ ಬರೆದುಕೊಡಬೇಕು. ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಇದು ಸಂವಿಧಾನದಲ್ಲಿ ಅಂಬೇಡ್ಕರ್ ಅವರು ನಮಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನವಾಗಿದೆ. ಹಿಂದುಗಳಿಗೆ ನಿರ್ಬಂಧ ಹೇರುವ ಸರ್ಕಾರ ಏಕೆ ಅನ್ಯಧರ್ಮೀಯರಿಗೂ ಈ ನಿರ್ಬಂಧಗಳನ್ನು ಹೇರುವುದಿಲ್ಲ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಾರ್ಥನೆ ಮಾಡುವುದು ಕೂಡ ಆಸ್ಪತ್ರೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಸರ್ಕಾರ ಏಕೆ ಇದನ್ನು ನಿರ್ಬಂಧಿಸಬಾರದು. ಕೇವಲ ಮತಬ್ಯಾಂಕಿಗಾಗಿ ರಾಜ್ಯ ಸರ್ಕಾರ ಹಿಟ್ಲರ್ ಶಾಹಿ ಆಡಳಿತ ನೀಡುತ್ತಿದೆ. ಹಬ್ಬಗಳಲ್ಲಿ ಗಲಾಟೆಯಾಗದಂತೆ ಹಿಂದುಗಳ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಯಾರು ಗಲಾಟೆಗೆ ಕಾರಣರಾಗುತ್ತಾರೋ ಅವರನ್ನು ಹದ್ದುಬಸ್ತಿನಲ್ಲಿಡಬೇಕು ಎಂದ ಅವರು ಸರ್ಕಾರದ ಈ ನಿರ್ಬಂಧಗಳನ್ನು ಖಂಡಿಸಿ ಆ. 18 ರಂದು ಎಲ್ಲಾ ಹಿಂದು ಸಂಘಟನೆಗಳು ಗಣಪತಿ ಮಹಾಮಂಡಲಗಳು ಹಾಗೂ ಶ್ರೀರಾಮಸೇನೆ ಉಗ್ರ ಪ್ರತಿಭಟನೆ ಹಮ್ಮಿಕೊಂಡಿದೆ ಹಾಗೂ ಅಂದು ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಈ ನಿರ್ಬಂಧ ತೆಗೆದುಹಾಕುವಂತೆ ಮನವಿ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶ್ರೀರಾಮಸೇನೆಯ ಮಣಿಸರ್ಕಾರ್, ಆನಂದ್ ಜ್ಯೋತಿ, ರಾಜೇಶ್,ರಮೇಶ್ ಕರಾಟೆ ಸೇರಿದಂತೆ ಇತರರಿದ್ದರು.
ಭಾರತದಲ್ಲಿ ಹಿಂದುಗಳು ಅಸುರಕ್ಷತೆಯಲ್ಲಿದ್ದಾರೆ
ಭಾರತದಲ್ಲಿ ಹಿಂದುಗಳು ಅಸುರಕ್ಷತೆಯಿಂದ ವಾಸ ಮಾಡುತ್ತಿದ್ದಾರೆ.ಕಾಶ್ಮೀರದಲ್ಲಿ ಸುಮಾರು 7 ಲಕ್ಷ ಹಿಂದುಗಳನ್ನು ಹೊರ ಹಾಕಲಾಯಿತು. ಕೇರಳ, ತಮಿಳುನಾಡು,ಕರ್ನಾಟಕದಲ್ಲಿ ಹಿಂದುಗಳ ಹತ್ಯೆ ನಡೆಯುತ್ತಿದೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಇತ್ತೀಚಿಗೆ ಉಪರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಹಮೀದ್ ಅನ್ಸಾರಿಯವರು ಮುಸ್ಲಿಮರಿಗೆ ಈ ದೇಶದಲ್ಲಿ ಅಸುರಕ್ಷತೆ ಇದೆ ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಹಮೀದ್ ಅನ್ಸಾರಿ ಹೇಳಿಕೆ ಖಂಡನೀಯ. ಮುಸ್ಲಿಮರಿಗೆ ಈ ದೇಶದಲ್ಲಿ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗಿದೆ. ಜಗತ್ತಿನ ಯಾವ ದೇಶದಲ್ಲಿಯೂ ಹಜ್ ಯಾತ್ರೆಗೆ ಧನ ಸಹಾಯ ನೀಡುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಹಜ್ ಯಾತ್ರೆಗೆ ಧನ ಸಹಾಯ ನೀಡಲಾಗುತ್ತಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳು ಹೆಚ್ಚಿನ ರೀತಿಯಲ್ಲಿ ಮುಸ್ಲಿಮರಿಗೆ ದೊರೆಯುತ್ತಿವೆ. ಈ ದೇಶದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಆದರೆ ಹಿಂದುಗಳು ಭಾರತದಲ್ಲಿ ಅಸುರಕ್ಷಿತವಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಈ ಕೂಡಲೇ ಹಮೀದ್ ಅನ್ಸಾರಿಯವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

Leave a Comment