ಹಿಂದಿ ಸಪ್ತಾಹಕ್ಕೆ ಆಕ್ಷೇಪ-ಕರವೇಯಿಂದ ಮಸಿ

ದಾವಣಗೆರೆ, ಸೆ. 14- ಹಿಂದಿ ಸಪ್ತಾಹ ಆಚರಿಸದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿ ನಾಮಫಲಕಕ್ಕೆ ಮಸಿ ಬಳಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಸೆ. 14ರಂದು ಹಿಂದಿ ಸಪ್ತಾಹ ಆಚರಣೆ ಮಾಡುತ್ತಿದೆ. ಭಾರತದ ಸಂವಿಧಾನದಲ್ಲಿ ಎಲ್ಲಿಯೂ ಯಾವ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಕರೆಯದಿದ್ದರು ಆಡಳಿತ ನುಡಿ ಎಂಬ ಹಿಂಬಾಗಿಲ ಹಾದಿಯ ಮೂಲಕ ಹಿಂದಿಯೇತರ ರಾಜ್ಯದ ಜನರ ಮೇಲೆ ಹಿಂದಿ ಭಾಷೆಯನ್ನು ಹೇರಿಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ 600 ಕ್ಕೂ ಹೆಚ್ಚು ಇಲಾಖೆಗಳಲ್ಲಿ ಹಿಂದಿ ಭಾಷೆ ಮುಖ್ಯವಾಗಿದೆ. ಆಯಾ ರಾಜ್ಯದ ಭಾಷೆಯನ್ನು ಕಡೆಗಣಿಸಿ ಆಡಳಿತ ಭಾಷೆಯ ಹೆಸರಿನಲ್ಲಿ ಹೇರಿಕೆ ಮಾಡಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕನ್ನಡ ಚೆನ್ನಾಗಿ ಓದಲು ಬರೆಯಲು ಬರುವ ಕನ್ನಡಿಗರಿಗೆ ಕೇಂದ್ರ ವ್ಯಾಪ್ತಿಯ ಇಲಾಖೆಗಳಲ್ಲಿ ಹಿಂದಿ ಬಾರದೆ ಅನಕ್ಷರಸ್ಥರ ಪಾಡು ಎದುರಿಸುವಂತಾಗಿದೆ. ಈ ಬಗ್ಗೆ ಕರವೇಯಿಂದ ಹಲವಾರು ಹೋರಾಟಗಳನ್ನು ನಡೆಸಿದ್ದೇವೆ. ಹೀಗಿದ್ದರು ಸಹ ಹಿಂದಿ ಸಪ್ತಾಹ ಆಚರಿಸುವ ಮೂಲಕ ಕನ್ನಡವನ್ನು ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಅವರ ನೇತೃತ್ವದಲ್ಲಿ ಗಿರೀಶ್ ಕುಮಾರ್, ಲೋಕೇಶ್, ಎಂ.ಬಿ, ಆಂಜನೇಯ ಮತ್ತಿತರರಿದ್ದರು.

Leave a Comment