ಹಾಸನಾಂಬ ದೇವಿ ದರ್ಶನಕ್ಕೆ ಕ್ಷಣಗಣನೆ..

ಹಾಸನ, ಅ. ೧೬- ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆಯಿಂದ ಜಿಲ್ಲಾಡಳಿತ ದೇವಾಲಯದ ಬಾಗಿಲು ತೆರೆಯಲಿದೆ. ಅ. ೧೭ ರಿಂದ ೨೯ ರವರೆಗೆ ಹಾಸನಾಂಬ ದೇವಿಯ ದರ್ಶನ ನಾಡಿನ ಭಕ್ತರಿಗೆ ದೊರೆಯಲಿದೆ.
ಈ ಬಾರಿ ಹದಿಮೂರು ದಿನಗಳ ಕಾಲ ಹಾಸನಾಂಬೆ ದೇವಿಯ ದೇವಾಲಯದ ಬಾಗಿಲು ತೆರೆಯಲಿದ್ದು, ಮೊದಲ ದಿನ ಮತ್ತು ಕೊನೆಯ ದಿನ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದಂತೆ ಈ ಎಲ್ಲ ದಿನಗಳಲ್ಲೂ ಭಕ್ತರು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ ೧೨.೩೦ಕ್ಕೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತಸಾಗರ ಹರಿದು ಬರಲಿದೆ.
ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಮಂದಿ ಭಕ್ತರು ದೇವಿಯ ದರ್ಶನವನ್ನು ಪಡೆಯಲು ಆಗಮಿಸುತ್ತಾರೆ.
ಪ್ರತಿದಿನ ಮುಂಜಾನೆ ೫ ಗಂಟೆಯಿಂದ ಮಧ್ಯಾಹ್ನ ೧.೩೦ ಹಾಗೂ ಮಧ್ಯಾಹ್ನ ೩.೩೦ ರಿಂದ ದಿನ ಮುಕ್ತಾಯದವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕಾಗಿ ೩೦೦ ಹಾಗೂ ೧೦೦೦ ರೂ. ಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
ಈಗಾಗಲೇ ಹಾಸನಾಂಬೆಯ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ದೇವಾಲಯದ ಅಕ್ಕಪಕ್ಕದ ರಸ್ತೆಗಳು ಸೇರಿದಂತೆ ಇಡೀ ಹಾಸನ ನವ ವಧುನಿಂತೆ ಸಿಂಗಾರಗೊಂಡಿದೆ.
ಜಿಲ್ಲಾಡಳಿತ ಭಕ್ತರಿಗೆ ಅಗತ್ಯವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯ ಸೇರಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿದೆ.
ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರು ಸರದಿಯ ಸಾಲಿನಲ್ಲಿ ತೆರಳುವಾಗ ಯಾವುದೇ ರೀತಿಯ ತೊಂದರೆಗಳು, ಗೊಂದಲಗಳು ಉಂಟಾಗದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿ.ಸಿ. ಟಿವಿ ಕಣ್ಗಾವಲು ಇರಿಸಲಾಗಿದ್ದು, ದೇವಿಯ ಸುಗಮ ದರ್ಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

 

Leave a Comment