ಹಾಳಾದ ರಸ್ತೆಯನ್ನು ಹೇಮಮಾಲಿನಿ ಕೆನ್ನೆಯಂತೆ ಮಾಡುತ್ತೇವೆ- ಕೈ ನಾಯಕ ಹೇಳಿಕೆಗೆ ಆಕ್ರೋಶ

ಭೋಪಾಲ್, ಅ ೧೬- ಮಧ್ಯಪ್ರದೇಶದ ರಸ್ತೆಯಲ್ಲಿ ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳನ್ನು ಇನ್ನು ೧೫ ದಿನಗಳಲ್ಲಿ ಬಾಲಿವುಡ್ ನಟಿ ಹಾಗೂ ಸಂಸದೆ ಹೇಮಮಾಲಿನಿ ಕೆನ್ನೆಯಂತೆ ಮಾಡಿ ಅಭಿವೃದ್ಧಿಪಡಿಸುತ್ತೇವೆ ಎಂದು ಮಧ್ಯ ಪ್ರದೇಶದ ಸಚಿವ ಪಿ.ಸಿ. ಶರ್ಮಾ ನೀಡಿರುವ ಹೇಳಿಕೆಗೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಅವರ ಕೆನ್ನೆಯಂತಿರುವ ಮಧ್ಯಪ್ರದೇಶದ ರಸ್ತೆಗಳನ್ನು ಸಂಸದೆ ಹೇಮಮಾಲಿನಿಯ ಕೆನ್ನೆಯಂತೆ ಕಾಂಗ್ರೆಸ್ ಸರ್ಕಾರ ಪರಿವರ್ತಿಸಲಿದೆ ಎಂಬ ವಿವಾದಾತ್ಮಕ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಹೇಮಮಾಲಿನಿಯಂತೆ ಯಾಕೆ, ಕಾಂಗ್ರೆಸ್ ನಾಯಕಿಯರಾದ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ವಾದ್ರ ಅವರ ಕೆನ್ನೆಯಂತೆ ರಸ್ತೆ ಸರಿಪಡಿಸುಬಹುದಲ್ಲ ಎಂದು ಸಲಹೆ ನೀಡಿದ್ದಾರೆ.
ಮಧ್ಯಪ್ರದೇಶದ ರಸ್ತೆಗಳನ್ನು ವಾಷಿಂಗ್ಟನ್ ರಸ್ತೆಗಳಂತೆ ಅಭಿವೃದ್ಧಿಪಡಿಸಲಾಗಿತ್ತು. ಆ ರಸ್ತೆಗಳು ಇಂದು ಏನಾಗಿವೆ ? ಭಾರೀ ಮಳೆಯಿಂದಾಗಿ ಎಲ್ಲೆಡೆ ಹೊಂಡಗಳಾಗಿವೆ. ಇಂದಿನ ರಸ್ತೆಗಳ ಸ್ಥಿತಿ ಸಿಡುಬಿನ ಕಲೆಗಳನ್ನು ಹೊಂದಿದ ಕೆನ್ನೆಯಂತಾಗಿದೆ. ರಸ್ತೆಗಳ ಇಂದಿನ ಸ್ಥಿತಿ ಕೈಲಾಶ್ ವಿಜಯವರ್ಗಿಯಾ ಅವರ ಕೆನ್ನೆಯಂತಾಗಿದ್ದು, ಮುಖ್ಯಮಂತ್ರಿ ಕಮಲ್‌ನಾಥ್ ಅವರ ಸೂಚನೆಯಂತೆ ೧೫ ದಿನಗಳ ಒಳಗಾಗಿ ರಸ್ತೆ ದುರಸ್ತಿ ಮಾಡಲಾಗುತ್ತದೆ. ಶೀಘ್ರವೇ ರಸ್ತೆಗಳು ಹೇಮಮಾಲಿನಿ ಕೆನ್ನೆಯಂತಾಗಲಿವೆ ಎಂದು ಭರವಸೆ ನೀಡಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕರು ಹದಗೆಟ್ಟ ರಸ್ತೆಗಳ ಸ್ಥಿತಿ ಬಗ್ಗೆ ಕಮಲ್‌ನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಧ್ಯಪ್ರದೇಶದ ಹಬೀಬ್ ಜಂಗ್ ನಲ್ಲಿ ರಸ್ತೆ ನಿರ್ಮಾಣದ ಸ್ಥಿತಿ ಗತಿಯ ಬಗ್ಗೆ ಪರಿಶೀಲನೆ ನಡೆಸಿದ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈಗಿನ ರಸ್ತೆ ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗೀಯ ಕೆನ್ನೆಯ ಹಾಗಿದೆ. ಅದನ್ನು ಸಂಸದೆ ಹೇಮಮಾಲಿನಿ ಕೆನ್ನೆಯ ಹಾಗೆ ನುಣುಪಾಗಿ ಮಾಡ್ತೀವಿ ಎಂದಿದ್ದರು, ಇದೀಗ ಈ ಹೇಳಿಕೆ ಆಕ್ಷೇಪಕ್ಕೆ ಗುರಿಯಾಗಿದೆ.

Leave a Comment