ಹಾಲಿ ಸದಸ್ಯರು, ಸದಸ್ಯೆಯರ ಪತಿಯರು ಭಾಗಿ-ಆರೋಪ

ಕವಿತಾಳ ಪಟ್ಟಣ ಪಂಚಾಯತಿ : ಹಣ ದುರ್ಬಳಕೆ
ರಾಯಚೂರು.ನ.22- ಕವಿತಾಳ ಪಟ್ಟಣದ ಮೂಲಸೌಕರ್ಯಗಳ ಅಳವಡಿಕೆ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾದ ಕೋಟ್ಯಾಂತರ ರೂ. ಸರ್ಕಾರಿ ಹಣ ಹಾಲಿ ಸದಸ್ಯರು ದುರ್ಬಳಕೆ ಮಾಡಿದ್ದಾರೆಂದು ಪಟ್ಟಣ ಪಂಚಾಯತಿ ಸದಸ್ಯ ಗಂಗಪ್ಪ ದಿನ್ನಿ ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ 2018-19 ಮತ್ತು 2019-20 ನೇ ಸಾಲಿನ ಶೌಚಾಲಯ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನ ಖರ್ಚಾಗಿದೆ ಆದರೆ ಶೌಚಾಲಯ ನಿರ್ಮಾಣವಾಗಿಲ್ಲ. ಶೌಚಾಯಲಗಳನ್ನು ಕಟ್ಟದೆ ಇರುವ ಹೆಸರಿನಲ್ಲಿ ನಕಲಿ ಹೆಸರು, ಫೋಟೋ ಅಂಟಿಸಿ ಬೋಗಸ್ ಬಿಲ್ ಎತ್ತುವಳಿ ಮಾಡಲಾಗಿದೆ. ಒಂದೇ ಶೌಚಾಲಯಕ್ಕೆ 4-5 ಜನರು ಪ್ರತ್ಯೇಕ ಭಾವಚಿತ್ರ ಇಳಿಯುವ ಮೂಲಕ ಬಿಲ್‌ಗಳನ್ನು ಎತ್ತುವಳಿ ಮಾಡಿದ್ದಾರೆಂದು ದೂರಿದರು.
ಪಟ್ಟಣ ಪಂಚಾಯತಿಯ ಕೆಲ ಹಾಲಿ ಸದಸ್ಯರು, ಸದಸ್ಯೆಯರ ಪತಿಯರು ಭಾಗಿಯಾಗಿ ಫಲಾನುಭವಿಗಳ ಹೆಸರಲ್ಲಿ ಶೌಚಾಲಯ ಮಂಜೂರು ಮಾಡಿಸಿ, ಕಟ್ಟದಿರುವ ಶೌಚಾಲಯಕ್ಕೆ ಬಿಲ್‌ ಎತ್ತುವಳಿ ಮಾಡಿ ಫಲಾನುಭವಿಗಳಿಗೆ ಬಿಡುಗಾಸು ಹಣ ನೀಡದೇ ದುರ್ಬಳಕೆ ಮಾಡಿದ್ದಾರೆ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ, ಇಂಜಿನೀಯರ್, ಕಂಪ್ಯೂಟರ್ ಅಪರೇಟರ್, ನೈರ್ಮಲ್ಯ ಅಧಿಕಾರಿಗಳು ಹಣ ಎತ್ತುವಳಿಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದರು.
ಶೌಚಾಲಯದ ಅವ್ಯವಹಾರದ ಮೂಲಕ 20 ಲಕ್ಷಕ್ಕೂ ಹೆಚ್ಚು ಹಣ ದುರ್ಬಳಕೆಯಾಗಿದೆ. ಕುಡಿವ ನೀರಿಗಾಗಿ ಬಿಡುಗಡೆಯಾದ 17 ಲಕ್ಷ ರೂ. ಯಾವುದೇ ಪೈಪ್‌ಲೈನ್‌ ಅಳವಡಿಸದೆ ಹಣ ದುರುಪಯೋಗ ಮಾಡಿದ್ದಾರೆ. ಕೂಡಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯತಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಭ್ರಷ್ಟಚಾರದಲ್ಲಿ ಭಾಗಿಯಾದ ಸದಸ್ಯರ ಸದಸ್ಯತ್ವವನ್ನು ಆನರ್ಹಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಣ್ಣ ವಕೀಲರು, ಮೌನೇಶ, ಜಾಗೀರ್ ಪಾಷಾ ಉಪಸ್ಥಿತರಿದ್ದರು.

Leave a Comment