ಹಾದಿ ತಪ್ಪಿದ ಮಹದಾಯಿ ಹೋರಾಟ

ಬೆಂಗಳೂರು, ಜ. ೧೨- ಮಹದಾಯಿ ಹೋರಾಟದಲ್ಲಿ ಮಹಾ ರಾಜಕಾರಣ ನಡೆದಿದೆಯೇ? ಮಹದಾಯಿ ಹೋರಾಟವನ್ನು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿವೆಯೇ? ಮಹದಾಯಿ ಹೋರಾಟ ರಾಜಕೀಯ ಪಕ್ಷಗಳ ದಾಳವಾಗಿದೆಯೇ? ಹೌದು, ಕಳೆದ ೧೦೦ ದಿನಗಳಿಂದ ನಡೆದಿರುವ ಹೋರಾಟ ಈಗ ಹಿಡಿದಿರುವ ಹಾದಿ, ದಿಕ್ಕು, ದಿಸೆ ಗಮನಿಸಿದರೆ ಹಲವು ಗುಮಾನಿಗಳು ಮೂಡುವ ಸನ್ನಿವೇಶ ಸೃಷ್ಟಿಯಾಗಿರುವುದು ಖಚಿತ.
ಮಹದಾಯಿ ಹೋರಾಟದ ಒಂದು ಗುಂಪು, ಒಂದು ರಾಜಕೀಯ ಪಕ್ಷದ ದಾಳಕ್ಕೆ ಬಲಿಯಾಗಿ ಅವರ ಇರಾದೆಯಂತೆ ಹೋರಾಟ ನಡೆಸುತ್ತಿದೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಉಂಟಾಗಿದೆ.
ಮಹದಾಯಿ ವಿವಾದ ಬಗೆಹರಿಸುವ ಸಂಬಂಧ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮಾತುಕತೆಗೆ ಸಿದ್ಧ ಎಂಬ ಪತ್ರ ನೀಡಿದ ನಂತರ ಹೋರಾಟಗಾರರ ಕಿಚ್ಚು ಇದ್ದಕ್ಕಿದ್ದಂತೆ ಹೆಚ್ಚಿ, ಬಿಜೆಪಿ ಕಚೇರಿ ಮುಂದೆ ಮೂರು ದಿನ ಅಹೋರಾತ್ರಿ ಧರಣಿ ನಡೆಸಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೂ ಹೋರಾಟ ನಿಲ್ಲದು ಎಂದು ರೈತರು ಧರಣಿ ನಡೆಸಿ, ಯಡಿಯೂರಪ್ಪನವರ ಜೊತೆ ಜಟಾಪಟಿ ನಡೆಸಿದ್ದರು.
ವಿವಾದ ಬಗೆಹರಿಸುತ್ತೇನೆ, ಸ್ವಲ್ಪ ಕಾಯಿರಿ ಎಂಬ ಯಡಿಯೂರಪ್ಪ ಮಾತಿಗೆ ಹೋರಾಟಗಾರರು ಜಗ್ಗದೇ, ಆಕ್ರೋಶ ವ್ಯಕ್ತಪಡಿಸಿ ನಂತರ ನಗರದಲ್ಲಿ ಪಾದಯಾತ್ರೆ ಕೈಗೊಂಡು ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಹೈಡ್ರಾಮ ನಡೆಸಿದ್ದರು.
ಇದರ ಹಿಂದೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದಾದ ನಂತರ ಗೋವಾ-ಕರ್ನಾಟಕ ಮುಖ್ಯಮಂತ್ರಿಗಳ ಆರೋಪ-ಪ್ರತ್ಯಾರೋಪದಲ್ಲಿ ಮಹದಾಯಿ ವಿವಾದ ಪರಿಹಾರ ಮೂಲೆಗುಂಪಾಗಿತ್ತು.
ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಪರಿಹಾರಕ್ಕೆ ಅಲ್ಲಿನ ವಿರೋಧ ಪಕ್ಷ ಕಾಂಗ್ರೆಸ್, ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.
ಈ ಹಿನ್ನೆಲೆಯಲ್ಲಿ ೨ ದಿನಗಳ ಹಿಂದೆ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಉಲ್ಟಾ ಹೊಡೆದು ಮಹದಾಯಿ ಮಾತುಕತೆ ಬೇಡ, ನ್ಯಾಯ ಮಂಡಳಿಯಲ್ಲೇ ಇತ್ಯರ್ಥವಾಗಲಿ ಎಂಬ ಹೇಳಿಕೆ ನೀಡಿದ್ದರು.
ಈ ಹೇಳಿಕೆ ನೀಡುತ್ತಿದ್ದಂತೆ ಮತ್ತೆ ಮಹದಾಯಿ ಹೋರಾಟಗಾರರು ನಿನ್ನೆ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದರು. ಆದರೆ, ಧರಣಿ ನಡೆಸಲು ಬಂದ ಹೋರಾಟಗಾರ ವಿರೇಶ ಸಬರಮಠದ ಗುಂಪಿನ ಮಹದಾಯಿ ಹೋರಾಟಗಾರರ ಮನ ಒಲಿಸಿ ಬಸ್‌ಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸದಲ್ಲಿದ್ದ ಮೈಸೂರಿಗೆ ಕರೆದೊಯ್ದು ಭೇಟಿ ಮಾಡಿಸಲಾಯಿತು.
ಈ ಹಿಂದೆ ಯಡಿಯೂರಪ್ಪ, ಗದಗ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದರು. ಅವರನ್ನು ಅಲ್ಲಿಯೇ ಭೇಟಿ ಮಾಡದೇ ಬೆಂಗಳೂರಿಗೆ ಬಂದು ಮೂರುದಿನ ಅಹೋರಾತ್ರಿ ಧರಣಿ ನಡೆಸಿದ್ದ ಹೋರಾಟಗಾರರು, ನಿನ್ನೆ ಮಾತ್ರ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸದೇ ಮೈಸೂರಿಗೆ ಹೋಗಿದ್ದರ ಹಿಂದೆ ರಾಜಕಾರಣ ಇದೆ ಎಂಬ ಪ್ರಶ್ನೆ ಮೂಡಿದೆ. ಮುಖ್ಯಮಂತ್ರಿ ಬೆಂಗಳೂರಿಗೆ ಬರುವವರೆಗೂ ಧರಣಿ ನಡೆಸದೇ ಮೈಸೂರಿಗೆ ಹೋಗಲು ನಿರ್ಧರಿಸಿದ ಹೋರಾಟಗಾರರ ತೀರ್ಮಾನದ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡ ಇದೆಯೇ? ಹೋರಾಟಗಾರರು ಕಾಂಗ್ರೆಸ್‌ನ ಕೈಗೊಂಬೆಯಾಗಿದ್ದಾರಾ? ಎಂಬ ಪ್ರಶ್ನೆಗಳು ಮೂಡಿವೆ.
ಬಿಜೆಪಿ ಕಚೇರಿ ಮುಂದೆ ಯಡಿಯೂರಪ್ಪ ಬರುವವರೆಗೂ ಹೋರಾಟ ನಿಲ್ಲಸಲು ಒಪ್ಪದ ರೈತ ಹೋರಾಟಗಾರರು, ಮುಖ್ಯಮಂತ್ರಿ ಬರುವವರೆಗೂ ಬೆಂಗಳೂರು ಬಿಟ್ಟು ಕದಲುವುದಿಲ್ಲ ಎಂಬ ನಿಲುವು ತೆಗೆದುಕೊಂಡಿದ್ದರೇ ನಿಜವಾಗಲು ಹೋರಾಟ ಪಕ್ಷಾತೀತ ಎನ್ನಬಹುದಾಗಿತ್ತು. ಆದರೆ, ಹೋರಾಟಗಾರ ವಿರೇಶ ಸಬರದ ಮಠದವರ ಗುಂಪಿನ ಹೋರಾಟದಲ್ಲಿ ರಾಜಕಾರಣ ನುಸುಳಿದೆ ಎಂದು ಬಿಜೆಪಿ ನಾಯಕರ ದೂರಾಗಿದೆ. ರಾಜಕೀಯ ಪಕ್ಷದ ಸೂಚನೆಗೆ ತಕ್ಕಂತೆ ಹೋರಾಟದ ಸ್ವರೂಪ ಬದಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕುಡಿಯುವ ನೀರಿಗಾಗಿ ಕಳೆದ ೯೦೦ ದಿನಗಳಿಂದ ನಡೆದಿರುವ ಹೋರಾಟ ಈ ರಾಜಕಾರಣಕ್ಕೆ ಬಲಿಯಾಗಿ ದಿಕ್ಕು ತಪ್ಪುತ್ತಿರುವುದು ದುರಂತ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಹೋರಾಟಗಾರರ ಪ್ರಾಮಾಣಿಕತೆಗೆ ಓರೆ ಹಚ್ಚುವ ಪರಿಸ್ಥಿತಿಗೆ ಹೋರಾಟ ಬಂದು ನಿಂತಿರುವುದು ನಿಜಕ್ಕೂ ಕಳವಳದ ಸಂಗತಿ.
ಮಹದಾಯಿ ವಿವಾದ ಪರಿಹಾರ ಆಗಬೇಕು ಎಂಬುದು ರಾಜ್ಯದ ಎಲ್ಲರ ಬಯಕೆ. ಕುಡಿಯುವ ನೀರಿಗಾಗಿ ನಡೆದಿರುವ ಹೋರಾಟವನ್ನು ರಾಜ್ಯದ ಜನ ಬೆಂಬಲಿಸಿದ್ದಾರೆ. ಬಂದ್‌ಗಳು ನಡೆದಿವೆ. ಆದರೆ, ಪಕ್ಷಾತೀತವಾಗಿ ನಡೆದಿದ್ದ ಮಹದಾಯಿ ಹೋರಾಟ ಈಗ ರಾಜಕಾರಣದ ಆಡೂಂಬಲವಾಗಿ ರೂಪಾಂತರಗೊಂಡಿರುವಂತೆ ಭಾಸವಾಗುತ್ತಿದೆ. ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಮಹದಾಯಿ ವಿವಾದ ಪರಿಹಾರಕ್ಕೆ ಸೂತ್ರ ರೂಪಿಸಿ ಚುನಾವಣೆಯಲ್ಲಿ ಅದರ ಲಾಭ ಪಡೆಯುವ ಇರಾದೆ ರಾಜಕೀಯ ಪಕ್ಷಗಳದ್ದಾಗಿದೆ. ಅದರಲ್ಲೂ ರಾಜ್ಯದಲ್ಲಿ ಮುಂದೆ ಅಧಿಕಾರ ಹಿಡಿಯಬೇಕು ಎಂಬ ಹಠದಲ್ಲಿರುವ ಬಿಜೆಪಿ ವಿವಾದಕ್ಕೆ ಪರಿಹಾರ ಸೂತ್ರ ರೂಪಿಸಲು ತನ್ನದೇ ಆದ ತಂತ್ರ ರೂಪಿಸಿರುವುದು ಸ್ಪಷ್ಟ.
ಈ ತಂತ್ರಗಾರಿಕೆಯ ಭಾಗವಾಗಿಯೇ ದೆಹಲಿಯಲ್ಲಿ ಕಳೆದ ತಿಂಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಪಾಲ್ಗೊಂಡು ಸಂಧಾನಸೂತ್ರ ರೂಪಿಸಿದ್ದರು.
ಬಿಜೆಪಿ ಮಹದಾಯಿಯಿಂದ ರಾಜಕೀಯ ಲಾಭ ಪಡೆಯದಂತೆ ಕಾಂಗ್ರೆಸ್ ಸಹ ತನ್ನದೇ ಆದ ತಂತ್ರ ರೂಪಿಸಿದೆ.
ಈ ರಾಜಕೀಯ ಪಕ್ಷಗಳ ಹಾವು-ಏಣಿಯಾಟದಲ್ಲಿ ಮಹದಾಯಿ ಹೋರಾಟ ಹಾಗೂ ಹೋರಾಟಗಾರರು ದಿಕ್ಕು ತಪ್ಪದೆ ತಾತ್ವಿಕವಾಗಿ ಹೋರಾಟ ಮುಂದುವರೆಸುವುದು ಸೂಕ್ತ.

Leave a Comment