ಹಾಡಿನ ರೂಪದಲ್ಲಿ ರಮೇಶ್‌ಗೆ ಟಾಂಗ್ ಕೊಟ್ಟ ಸತೀಶ್

ಬೆಳಗಾವಿ, ಅ ೯- ಜಿಲ್ಲೆಯ ಗೋಕಾಕ್ ನಗರಸಭೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸತೀಶ್ ಜಾರಕಿಹೊಳಿ ಅದನ್ನು ಹಾಡಿನ ಮುಖಾಂತರವೇ ಹೇಳಿ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.
ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ ಎಂಬ ಹಾಡಿನ ಮೂಲಕ ಸತೀಶ್ ಜಾರಕಿಹೊಳಿ ಗೋಕಾಕ್ ನಗರ ಮತ್ತು ತಾಲೂಕಿನಲ್ಲಿ ನೆರೆ ಬಂದಾಗ ನಡೆದ ಅವ್ಯವಹಾರ ಬಗ್ಗೆ ತಿಳಿಸಿದ್ದಾರೆ.
ಇನ್ನೊಂದೆಡೆ ಮಂಗಳವಾರ ನಡೆದ ಗೋಕಾಕ್ ಪಟ್ಟಣದ ಸ್ವಚ್ಛತಾ ಕಾರ್ಯಕ್ರಮದ ಅಭಿನಂದನಾ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಸಹೋದರ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ, ನಗರ ಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೊತ್ವಾಲ್, ನಾವು ಯಾವ ಹಾಡು ಬಿಡುಗಡೆಗೊಳಿಸಬೇಕು ಎಂಬ ಚಿಂತೆಯಲ್ಲಿದ್ದಾರೆ ಎಂದು ಸತೀಶ್ ಟೀಕಿಸಿದರು.
ರಮೇಶ್ ಬೆಂಬಲಿಗ ಕೊತ್ವಾಲ ಹೋಸ 500 ರೂ. ನೋಟು ತಗೊಂಡು ಬರುತ್ತಾನೆ. ಹಮಾರಾ ಆದ್ಮಿ ಅಂತ ನೀವು ಮೋಸ ಹೋಗದಿರಿ, ಆತ 500 ಕೊಟ್ಟು 500 ಕೋಟಿ ಲೂಟಿ ಮಾಡುತ್ತಾನೆ. ನನಗೆ ನಮ್ಮ ಸಮಸ್ಯೆಗಳನ್ನ ಕೇಳಲು ಶಾಸಕ ಬರಬೇಕು, ಆದರೆ ರಮೇಶ್ ಬೆಂಬಲಿಗರು ಮತ ಕೇಳಲು ಬೇರೆಯೇ ಸೋಗಿನಲ್ಲಿ ಬರುತ್ತಾರೆ. ಯಾರೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಆದರೆ ಮತ ಮಾತ್ರ ನಮಗೇ ಹಾಕಿ ಎಂದು ಲಖನ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದರು.
ಕೊತ್ವಾಲ, ಅಂಬಿ ಇಬ್ಬರೂ ಗೋಕಾಕ್‍ನಲ್ಲಿ ಪ್ರವಾಹಕ್ಕೆ ಮನೆ ಕಳೆದುಕೊಂಡವರ ಹೆಸರಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ಗೋಕಾಕ್ ನಗರವನ್ನು ಸ್ವಚ್ಛ ಮಾಡುವ ಹೆಸರಲ್ಲಿ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಗೋಕಾಕ್ ತಾಲೂಕಿನಲ್ಲಿ ಹೊಸ ಕಾರ್ಖಾನೆ ಬರುತ್ತಿಲ್ಲ, ಕಾರ್ಖಾನೆ ಬಂದರೆ ಅದರಲ್ಲೂ ಪಾಲು ಕೊಡಿ ಅಂತ ರಮೇಶ್ ಬೆಂಬಲಿಗರು ಬಂದು ಕೇಳುತ್ತಾರೆ. ಆದ್ದರಿಂದ ಈ ಬಾರಿ ಉಪಚುಣಾವಣೆಯಲ್ಲಿ ಶಾಸಕರನ್ನ ಬದಲಾವಣೆ ಮಾಡಲೇಬೇಕು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಕರೆಸಿ, ಅವರು ಸ್ಟೇಜ್ ಮೆಲೆ ಕಣ್ಣೀರು ಹಾಕುತ್ತಾರೆ. ರಮೇಶ್ ಜಾರಕಿಹೊಳಿನೂ ಅಳುತ್ತಾನೆ. ಅವರು ಒಂದು ಸಾರಿ ಅತ್ತರೆ ನಿಮ್ಮನ್ನ ಐದು ವರ್ಷ ಕಣ್ಣೀರು ಹಾಕಿಸುತ್ತಾರೆ. ಆದ್ದರಿಂದ ಈ ಬಾರಿ ಲಖನ್ ಅವರನ್ನ ಆರಿಸಿ, ನಗರದ ಅಭಿವೃದ್ಧಿ ಮಾಡಲು ಅವಕಾಶ ನೀಡಿ. ಜನರಿಂದ ನಾವು ಇಷ್ಟೊಂದು ಎತ್ತರಕ್ಕೆ ಬಂದಿದ್ದೆವೆ. ಲಖನ್ ಜಾರಕಿಹೊಳಿ ಮತ್ತು ನಾನು ನಿಮ್ಮ ಪರವಾಗಿದ್ದೇವೆ ಎಂದರು.
ನಾವೂ ನಿಮ್ಮ ಜೊತೆ ಇದ್ದೇವೆ. ಇಂತಹ 10 ಪ್ರವಾಹ ಬರಲಿ ಗೋಕಾಕ್ ಸ್ವಚ್ಛತೆಗೆ ನಾನೂ ಸದಾ ಸಿದ್ಧ. ಒಂದು ತಿಂಗಳಲ್ಲಿ 40 ಗ್ರಾಮವನ್ನ ಸ್ವಚ್ಛ ಮಾಡಿದ್ದೇವೆ. ಗೋಕಾಕ್ ನಗರದಲ್ಲಿ ಪ್ರವಾಹ ಬಂದ ಬಳಿಕ ಸ್ವಚ್ಛತೆಯನ್ನ ನಾವು ಮಾಡಿದ್ದು. ಆದರೆ ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ನಗರಸಭೆ ಸ್ವಚ್ಛ ಮಾಡಿದೆ ಎಂದು ಒಂದು ಕೋಟಿ ಲೂಟಿ ಮಾಡಿದ್ದಾರೆ. ಲೂಟಿ ಹಣದಲ್ಲಿ ಅರ್ಧ ಕೊತ್ವಾಲ್ ಗೌಡಾ ಕಿ ಜೆಬ್ ಮೆ, ಅರ್ಧ ಅಂಬಿಗೆ ಎಂದು ಸತೀಶ್ ಮಾರ್ಮಿಕವಾಗಿ ಕಿಡಿಕಾರಿದರು.
ಮುಂಬರುವ ದಿನಗಳಲ್ಲಿ ನಿಮ್ಮ ಪರವಾಗಿ ಇರುವಂತವರು ಶಾಸಕರಾಗಬೇಕು. ನಮ್ಮನ್ನ ಜನ ಶಾಸಕರನ್ನಾಗಿ ಮಾಡಿದ್ದಾರೆ, ಯಾವುದೇ ಶ್ರೀಮಂತಿಕೆ ನಮ್ಮನ್ನ ಶಾಸಕನನ್ನಾಗಿ ಮಾಡಿಲ್ಲ. ಅದರ ಅರಿವು ನಮಗೆ ಇರಬೇಕು.

Leave a Comment