ಹಾಗಲವಾಡಿ ಕುಡಿವ ನೀರು ಯೋಜನೆಗೆ ಜಮೀನು ಬಿಟ್ಟು ಕೊಡಿ: ರೈತರಿಗೆ ಸಚಿವರ ಮನವಿ

ತುಮಕೂರು, ಜೂ. ೩೦- ಬಿಕ್ಕೆಗುಡ್ಡ ಮತ್ತು ಹಾಗಲವಾಡಿ ಕುಡಿಯುವ ನೀರು ಯೋಜನೆ ನಿರ್ಮಾಣಕ್ಕೆ ರೈತರು ತಮ್ಮ ಜಮೀನು ಬಿಟ್ಟುಕೊಟ್ಟು ಯೋಜನೆಗಳನ್ನು ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮನವಿ ಮಾಡಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಹೇಮಾವತಿ ನಾಲಾ ಇಂಜಿನಿಯರ್‍ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆಗಳಾದ ಈ ಎರಡು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡು ಕೆರೆಗಳಿಗೆ ನೀರು ಹರಿಸಬೇಕಾಗಿತ್ತು.  ಆದರೆ ಕೆಲವೊಂದು ಕಡೆ ರೈತರು ಜಮೀನು ಬಿಟ್ಟು ಕೊಡದೆ ಇರುವುದರಿಂದ ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದರು. ‌

ಈ ಯೋಜನೆಗಳಿಗೆ ಭೂಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಸರ್ಕಾರ ನ್ಯಾಯಸಮತ ಬೆಲೆಯನ್ನು ನೀಡಲಿದೆ.  ಭೂಮಿಯನ್ನು ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಿ ಎಂದು ಸಭೆಯಲ್ಲಿ ಹಾಜರಿದ್ದ ರೈತರಿಗೆ ಮನವಿ ಮಾಡಿದರು.

ಯೋಜನೆ ಹಾದು ಹೋಗುವ ಮಾರ್ಗಮಧ್ಯದಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ರೈತರು ಸಚಿವರಿಗೆ ಕೋರಿದರು.

ಸಭೆಯಲ್ಲಿ ಸಂಸದರಾದ ಜಿ.ಎಸ್. ಬಸವರಾಜು, ಮಾಜಿ ಸಚಿವ ಹಾಗೂ ಶಾಸಕ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಉಪವಿಭಾಗಾಧಿಕಾರಿ ಅಜಯ್, ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಹೇಮಾವತಿಯ ನಾಲಾ ಮುಖ್ಯ ಇಂಜಿನಿಯರ್ ಬಾಲಕೃಷ್ಣ ಸೇರಿದಂತೆ ಹೇಮಾವತಿ ನಾಲಾ ಇಂಜಿನಿಯರ್‍ಗಳು ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳು ಪಾಲ್ಗೊಂಡಿದ್ದರು.

Share

Leave a Comment