ಹಾಕಿ: ಫಿಜಿ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಭಾರತ ವನಿತೆಯರು

ಹೀರೋಶಿಮಾ, ಜೂ 18 – ಗೆಲುವಿನ ಲಯ ಮುಂದುವರಿಸಿದ ಭಾರತ ಹಾಕಿ ಮಹಿಳಾ ತಂಡ, ಎಫ್‌ಐಎಚ್‌ ಮಹಿಳಾ ಸೀರೀಸ್‌ ಫೈನಲ್ಸ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಫಿಜಿ ವಿರುದ್ಧ 11-0 ಭಾರಿ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಪಂದ್ಯದ ಗೆಲುವಿನೊಂದಿಗೆ ಭಾರತ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಅಲಂಕರಿಸಿತು. ಜತೆಗೆ, ಟೂರ್ನಿಯ ಸೆಮಿಫೈನಲ್ಸ್‌ಗೆ ನೇರವಾಗಿ ಅರ್ಹತೆ ಪಡೆದಿದೆ.

ಪಂದ್ಯದ ಆರಂಭದಲ್ಲೇ ಅತ್ಯುತ್ತಮ ಪ್ರದರ್ಶನ ತೋರಿದ ಭಾರತ, ಆರಂಭದಲ್ಲೇ ಗೋಲಿನ ಖಾತೆ ತೆರೆಯಿತು. ನಾಲ್ಕನೇ ನಿಮಿಷದಲ್ಲಿ ಲಾಲ್ರೆಮ್‌ಸಿಯಾಮಿ ಹೊಡೆದ ಚೆಂಡು ಫಿಜಿ ತಂಡದ ರಕ್ಷಣಾ ಆಟಗಾರ್ತಿಗೆ ತಾಗಿ ನೇರವಾಗಿ ಗೋಲು ಪಟ್ಟಿ ಸೇರಿದೆ.  10ನೇ ನಿಮಿಷದಲ್ಲಿ ರಾಣಿ ರಾಂಪಾಲ್‌ ಮೊದಲು ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

ಇದಾದ ಒಂದೇ ನಿಮಿಷದ ಅಂತರದಲ್ಲಿ ಅಂದರೆ 11ನೇ ನಿಮಿಷದಲ್ಲಿ ಮೊನಿಕಾ ಹಾಗೂ 12ನೇ ನಿಮಿಷದಲ್ಲಿ ವಂದನಾ ಅವರು ಭಾರತಕ್ಕೆ ಎರಡು ಗೋಲುಗಳನ್ನು ಕೊಡುಗೆಯಾಗಿ ನೀಡಿದರು. ನಂತರ 15ನೇ ನಿಮಿಷದಲ್ಲಿ ಗುರುಜಿತ್‌ ಕೌರ್‌ ಅವರು ಗಳಿಸಿದ ಸುಲಭ ಗೋಲಿನಿಂದ ಭಾರತ ಮೊದಲ ಕ್ವಾರ್ಟರ್‌ ಮುಕ್ತಾಯಕ್ಕೆ 5-0 ಮುನ್ನಡೆ ಸಾಧಿಸಿತು.

ಎರಡನೇ ಕ್ವಾರ್ಟರ್‌ನಲ್ಲೂ ಗೋಲಿನ ಸುರಿಮಳೆ ಮುಂದುವರಿಸಿದ ಭಾರತ 18ನೇ, 21ನೇ ಹಾಗೂ 22ನೇ ನಿಮಿಷದಲ್ಲಿ ಗುರುಜೀತ್‌ ಕೌರ್ ಭಾರತಕ್ಕೆ ಮೂರು ಗೋಲುಗಳನ್ನು ಕೊಡುಗೆಯಾಗಿ ನೀಡಿದರು. ಆ ಮೂಲಕ ಎರಡನೇ ಕ್ವಾರ್ಟರ್‌ ಮುಕ್ತಾಯಕ್ಕೆ ರಾಣಿ ರಾಂಪಾಲ್‌ ಪಡೆ 8-0 ಮುನ್ನಡೆ ಸಂಪಾದಿಸಿತು.

ಮೂರನೇ ಕ್ವಾರ್ಟರ್‌ನಲ್ಲಿ ತೀವ್ರ ಒತ್ತಡದಲ್ಲಿ ಕಣಕ್ಕೆ ಇಳಿದ ಫಿಜಿ ಆಟಗಾರ್ತಿಯರು ಗೋಲಿನ ಖಾತೆ ತೆರೆಯಲು ಭಾರಿ ಹೋರಾಟ ನಡೆಸಿದರು. ಆದರೆ, ಭಾರತದ ರಕ್ಷಣಾ ಕೋಟೆ ಭೇದಿಸಲು ಸಾಧ್ಯವಾಗಲಿಲ್ಲ. ಮೋನಿಕಾ ಅವರು 33ನೇ ನಿಮಿಷದಲ್ಲಿ ತನ್ನ ಎರಡನೇ ಗೋಲು ಗಳಿಸಿದರು. ಭಾರತ ಮೂರನೇ ಕ್ವಾರ್ಟರ್‌ ಮುಕ್ತಾಯಕ್ಕೆ 9-0 ಮುನ್ನಡೆ ಪಡೆಯಿತು.

ನಂತರ, ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್‌ನಲ್ಲಿ ಉತ್ಸಾಹದಲ್ಲಿ ಕಣಕ್ಕೆ ಇಳಿದ ಭಾರತೀಯ ಆಟಗಾರ್ತಿಯರು, ಫಿಜಿ ವಿರುದ್ಧ ಪಾರಮ್ಯ ಸಾಧಿಸಿದರು. 51 ಮತ್ತು 57 ನಿಮಿಷದಲ್ಲಿ ಕ್ರಮವಾಗಿ ಲಲಿಮಾ ಮಿನ್ಜ್‌ ಹಾಗೂ ನವನೀತ್‌  ಅವರು ಗೋಲು ಗಳಿಸಿದರು. ಅಂತಿಮವಾಗಿ ಪಂದ್ಯದ ನಿಗದಿತ ಅವಧಿ ಮುಕ್ತಾಯಕ್ಕೆ ಭಾರತ ವನಿತೆಯರು 11-0 ಭಾರಿ ಅಂತರದಲ್ಲಿ ಗೆದ್ದು ಫಿಜಿ ಮಹಿಳಾ ಮಣಿಗಳನ್ನು ಸೋಲಿಸಿದರು.

Leave a Comment