ಹಸುಗೂಸು ಬಿಟ್ಟು ಬಾಣಂತಿ ಆತ್ಮಹತ್ಯೆ

ಹುಳಿಯಾರು, ಆ. ೨೫- ಕೇವಲ 11 ದಿನದ ಹಸುಗೂಸನ್ನು ಬಿಟ್ಟು ತಾಯಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೋಬಳಿಯ ಮಲ್ಲೇಗೆರೆ ಸಮೀಪದ ದಗ್ಗೇನಹಳ್ಳಿಯಲ್ಲಿ ನಡೆದಿದೆ.
ಜಯಲಕ್ಷ್ಮಮ್ಮ (21) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ದಗ್ಗೇನಹಳ್ಳಿ ದಕ್ಷಿಣಮೂರ್ತಿ ಗೋಡೆಕೆರೆಯ ಜಯಲಕ್ಷ್ಮಮ್ಮ ಅವರನ್ನು 1 ವರ್ಷದ ಹಿಂದೆ ವಿವಾಹವಾಗಿದ್ದರು. ಗಂಡನ ಮನೆಯಲ್ಲಿ ಕಳೆದ 11 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಗಂಡನ ಮನೆಯವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮೃತ ಜಯಲಕ್ಷ್ಮಮ್ಮ ಅವರ ಚಿಕ್ಕಮ್ಮ ಮಂಜುಳಾ ಅವರು ಹಂದನಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದಕ್ಷಿಣಾಮೂರ್ತಿ, ಮಾವ ಶೇಖರಾಚಾರ್, ಮೈದುನ ಯೋಗೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕರಡಿ ದಾಳಿ: ವ್ಯಕ್ತಿಗೆ ಗಾಯ
ತುಮಕೂರು, ಆ. ೨೫- ಮೇಕೆ ಮೇಯಿಸಲು ಹೊಲಕ್ಕೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಕೋರಾ ಹೋಬಳಿಯ ನಾಯಕನಪಾಳ್ಯದಲ್ಲಿ ನಡೆದಿದೆ.
ಗ್ರಾಮದ ನರಸಿಂಹಮೂರ್ತಿ (50) ಎಂಬುವರೇ ಕರಡಿ ದಾಳಿಯಿಂದ ಗಾಯಗೊಂಡಿರುವ ವ್ಯಕ್ತಿ. ಇವರು ಎಂದಿನಂತೆ ಮೇಕೆಗಳನ್ನು ಮೇಯಿಸಲು ಊರಿನ ಹೊರವಲಯದ ಹೊಲಕ್ಕೆ ತೆರಳಿದ್ದಾರೆ. ಆ ಸಂದರ್ಭದಲ್ಲಿ ಪೊದೆಯೊಳಗೆ ಅವಿತು ಕುಳಿತಿದ್ದ ಕರಡಿ ದಿಢೀರನೆ ದಾಳಿ ಮಾಡಿದೆ. ಕರಡಿ ಮೇಲೆರಗುತ್ತಿದ್ದಂತೆ ನರಸಿಂಹಮೂರ್ತಿ ಕಿರುಚಾಡಿದ್ದಾರೆ. ತಕ್ಷಣ ಅಕ್ಕಪಕ್ಕದ ಜಮೀನಿನಲ್ಲಿದ್ದ ದನಗಾಹಿಗಳು ಓಡಿ ಬಂದು ಗಲಾಟೆ ಮಾಡಿ ದಾಳಿ ಮಾಡಿದ್ದ ಕರಡಿಯನ್ನು ಓಡಿಸಿದ್ದಾರೆ.
ನರಸಿಂಹಮೂರ್ತಿಯವರ ತಲೆ, ಮೈಕೈಗೆ ಗಾಯವಾಗಿದ್ದು, ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ವ್ಯಾನ್- ಸ್ಕೂಟರ್ ಡಿಕ್ಕಿ ವ್ಯಕ್ತಿ ದುರ್ಮರಣ
ಬಂಗಾರಪೇಟೆ, ಆ ೨೫- ದಿಂಬಾ ಗೇಟ್ ಬಳಿ ಇಂದು ಬೆಳಿಗ್ಗೆ ಮಾರುತಿ ವ್ಯಾನ್ ಹಾಗೂ ಕೈನಿಟಿಕ್ ಸ್ಕೂಟರ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಮೃತಪಟ್ಟು ಮಹಿಳೆಯೊರ್ವರಿಗೆ ಗಂಭೀರ ಗಾಯವಾಗಿದೆ.
ದಿಂಬಾ ಗೇಟ್ ಬಳಿ ಕೈನಿಟಿಕ್ ಹೊಂಡಾದಲ್ಲಿ ರಾಮಪ್ಪ (60) ಹಾಗೂ ಪತ್ನಿ ಸರೋಜಮ್ಮ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ದಿಂಬಾ ಗೇಟ್ ಬಳಿ ಎದುರಿನಿಂದ ವೇಗವಾಗಿ ಬಂದ ಮಾರುತಿ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ರಾಮಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಗೂ ಪತ್ನಿ ಸರೋಜಮ್ಮ ಅವರಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಕೋಲಾರದ ಎಸ್.ಎನ್.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾರುತಿ ವ್ಯಾನ್ ಚಾಲಕ ನಾಗರಾಜ್‌ನನ್ನು ಬಂಧಿಸಿರುವ ಪೊಲೀಸರು ವ್ಯಾನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Leave a Comment