ಹಸುಗಳ ನೀಡಿಕೆ: ವಂಚನೆ ತಡೆಗೆ ಚಿಪ್ ಅಳವಡಿಕೆ: ನಾಡಗೌಡ

ಬೆಂಗಳೂರು, ಜೂ. ೧೫- ಅರ್ಹ ರೈತ ಫಲಾನುಭವಿಗಳಿಗೆ ಹಸುಗಳನ್ನು ವಿತರಿಸುವಾಗ ವಂಚನೆಯಾಗುತ್ತಿದೆ ಎಂಬ ಆರೋಪ ನಿವಾರಣೆಗಾಗಿ ಇನ್ನು ಮುಂದೆ ಹಸುಗಳಿಗೆ ಚಿಪ್ ಅಳವಡಿಸಲಾಗುವುದು ಎಂದು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಅವರು ಇಂದಿಲ್ಲಿ ತಿಳಿಸಿದರು.
ರೈತರು ಮತ್ತು ಅಧಿಕಾರಿಗಳು ಶಾಮೀಲಾಗಿ ಯಾವುದಾದರು ಹಸುವನ್ನು ತಂದು ಛಾಯಾಚಿತ್ರ ತೆಗೆಸಿಕೊಂಡು ಹಣವನ್ನು ಕಬಳಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಹಸುಗಳಿಗೆ ಚಿಪ್ ಅಳವಡಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಹಸುಗಳಿಗೆ ಚಿಪ್ ಅಳವಡಿಸುವುದರಿಂದ ಹಸು ಎಲ್ಲಿದೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಅಲ್ಲದೆ ಅರ್ಹ ಫಲಾನುಭವಿಗಳು ಹಸುವನ್ನು ಪಡೆದ ನಂತರ 6 ವರ್ಷಗಳವರೆಗೆ ಮಾರಾಟ ಮಾಡುವಂತಿಲ್ಲ ಎಂಬುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಪಶುಸಂಗೋಪನಾ ಇಲಾಖೆಯಲ್ಲಿ ಸಾಫ್ಟ್‌ವೇರನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇಡೀ ಇಲಾಖೆಯನ್ನು ಕಾಗದರಹಿತವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಸದ್ಯದಲ್ಲಿ ಈ ನೂತನ ವ್ಯವಸ್ಥೆಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆಂದು ತಿಳಿಸಿದರು.
ಇಲಾಖೆಯಲ್ಲಿ ಎಷ್ಟು ಅಧಿಕಾರಿಗಳು ಮತ್ತು ನೌಕರರು ಎಷ್ಟು ದಿನಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ನೂತನ ಸಾಫ್ಟ್‌ವೇರ್ ಅಳವಡಿಕೆಯಿಂದ ಗೊತ್ತಾಗಲಿದೆ ಎಂದು ಹೇಳಿದರು.
ಮತ್ತೊಂದು ಸಾಫ್ಟ್‌‌ವೇರ್‌ನ್ನು ಅಭಿವೃದ್ಧಿಪಡಿಸಲಾಗಿದ್ದು, ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಎಷ್ಟು ಔಷಧಿಗಳು ಲಭ್ಯವಿದೆ ಮತ್ತು ಎಷ್ಟು ಔಷಧಿಗಳು ಅವಧಿ ಮೀರಿದೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.
ಹೆಚ್ಚುವರಿ ಔಷಧಿಗಳನ್ನು ಔಷಧಿಯ ಕೊರತೆ ಇರುವ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ಆನ್‌ಲೈನ್ ಮೂಲಕ ಪಶುವೈದ್ಯರು ಔಷಧಿಗಳಿಗೆ ಬೇಡಿಕೆ ಸಲ್ಲಿಸಿದರೆ ತಕ್ಷಣವೇ ಔಷಧಗಳನ್ನು ಪೂರೈಸಲಾಗುವುದು ಎಂದು ಅವರು ತಿಳಿಸಿದರು.

Leave a Comment