ಹಸಿ-ಒಣ ಕಸ ಸಂಗ್ರಹಕ್ಕೆ ಪಾಲಿಕೆಯಿಂದ ಚಾಲನೆ

ದಾವಣಗೆರೆ, ಜ. 10 – ಮಹಾನಗರ ಪಾಲಿಕೆ ವತಿಯಿಂದ ನಗರದ 21ನೇ ವಾರ್ಡ್ ವ್ಯಾಪ್ತಿಯಿಂದ 41ನೇ ವಾರ್ಡ್ ವರೆಗೂ ಬರುವ ಎಲ್ಲಾ ವಾಣಿಜ್ಯೋದ್ಯಮ ಅಂಗಡಿಮುಂಗ್ಗಟ್ಟುಗಳು, ಹೋಟೆಲ್, ಲಾಡ್ಜ್ ಗಳು, ಜ್ಯೂಸ್ ಸ್ಟಾಲ್ ಗಳು ಇತರೆಡೆ ಸಂಗ್ರಹವಾಗುವ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಮೇಯರ್ ಶೋಭಾ ಪಲ್ಲಾಗಟ್ಟೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುವುದರಿಂದ ಹಲವಾರು ಪ್ರಯೋಜನಗಳಿವೆ.ಇದರಿಂದ ಗ್ಯಾಸ್, ಎರೆಹುಳ ಗೊಬ್ಬರ ತಯಾರಿಸಬಹುದು.ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು. ಹಂದಿಹಿಡಿಯುವುದು ಮತ್ತು ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂಬ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅನುದಾನ ಬರುವುದು ಸ್ವಲ್ಪ ವಿಳಂಬವಾಗುತ್ತಿದೆ. ಹಾಗಾಗಿ ಕಾಮಗಾರಿ ವಿಳಂಬವಾದರು ಗುಣಮಟ್ಟದ ಕೆಲಸ ಮಾಡಲಾಗುತ್ತಿದೆ. ಹಂದಿಗಳ ಸಾಗಾಣಿಕೆಯಾಗುತ್ತಿದೆ. ದೊಡ್ಡ ದೊಡ್ಡ ಹಂದಿಗಳನ್ನು ಹಿಡಿಯಲಾಗುತ್ತಿದೆ. ಮತ್ತೆ ತೆರವು ಕಾರ್ಯಾಚರಣೆ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ಪಾಲಿಕೆ ಸದಸ್ಯ ಶಿವನಹಳ್ಳಿರಮೇಶ್ ಮಾತನಾಡಿ, ಸ್ವಚ್ಚ ಪರಿಸರಸ್ನೇಹಿ ನಗರವನ್ನಾಗಿ ಮಾಡಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಸಹ ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಪಾಲಿಕೆಯೊಂದಿಗೆ ಸಹಕರಿಸಬೇಕು ಆಗ ರಾಜ್ಯದಲ್ಲೇ ದಾವಣಗೆರೆ ನಗರವನ್ನು ಮಾದರಿ ನಗರವನ್ನಾಗಿ ಮಾಡಲು ಸಾಧ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪಆಯುಕ್ತ ರವೀಂದ್ರ ಮಲ್ಲಾಪುರ, ಧನ್ಯಕುಮಾರ್, ಜಗದೀಶ್ ಸೇರಿದಂತೆ ಮತ್ತಿತರರಿದ್ದರು.

Leave a Comment